ಉಡುಪಿ : ಚಾಕೊಲೇಟ್ ಆಮಿಷವೊಡ್ಡಿ 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುಳೇಬಾವಿ ಗ್ರಾಮದ ಮುತ್ತು ಎನ್ನಲಾಗಿದ್ದು, ಜನವರಿ 23 ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಪತ್ತೆಹಚ್ಚಲು ಪೊಳೀಸರು 5 ವಿಶೇಷ ತಂಡಗಳನ್ನು ರಚಿಸಿದ್ದರು. ಹಲವು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ಸಾರ್ವಜನಿಕರ ಸಹಾಯವನ್ನು ಕೋರಿದ ನಂತರ, ಪೊಲೀಸರು ಅಂತಿಮವಾಗಿ ನಿನ್ನೆ ಸಂಜೆ ಶ್ರೀ ಕೃಷ್ಣ ಮಠದ ಸುತ್ತಮುತ್ತಲಿನ ವಾದಿರಾಜ್ 3 ನೇ ಕ್ರಾಸ್ ಬಳಿ ಮುತ್ತುನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಅಂಗಡಿ ಬಳಿ ಆಟವಾಡುತ್ತಿದ್ದ ವೇಳೆ ಕಾಮುಕನೊಬ್ಬ ಚಾಕೊಲೇಟ್ ಕೊಡಿಸುವುದಾಗಿ ಕರೆದುಕೊಂಡು ಬಾಲಕಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡುವ ವೇಳೆ ಬಾಲಕಿ ಕಿರುಚಿಕೊಂಡಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.