ಉಡುಪಿ: ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ ಸಂಬಂಧ ಇಂದು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬ್ರಹ್ಮಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆಯ ಸುತ್ತಮುತ್ತ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಠಾಣೆ ಬಳಿ ಬಿಗಿ ಭದ್ರತೆ ನೀಡಲಾಗಿದೆ. ಠಾಣೆ ಬಳಿ ಗುಂಪು ಸೇರುವಂತಿಲ್ಲ, ಪ್ರತಿಭಟನೆ ನಡೆಸುವಂತಿಲ್ಲ.
ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಹೇಶ್ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಮಹೇಶ್ ತಿಮರೋಡಿ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಉಜಿರೆ ನಿವಾಸಕ್ಕೆ ಉಡುಪಿಯ ಎಸ್ ಪಿ ಸುಧಾಕರ್ ನಾಯಕ್ ನೇತೃತ್ವದ ತಂಡ ಆಗಮಿಸಿ ವಶಕ್ಕೆ ಪಡೆದಿದೆ.
ಆಗಸ್ಟ್ 16 ರಂದು ಫೇಸ್ಬುಕ್ ಪೇಜ್ನಲ್ಲಿ ಮಹೇಶ ಶೆಟ್ಟಿ ತಿಮರೋಡಿಯು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ರವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿ ಹಿಂಧೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಮಹೇಶ ಶೆಟ್ಟಿ ತಿಮರೋಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಲಾಧ್ಯಕ್ಷ ರಾಜೀವ ಕುಲಾಲ್ ಅವರು ದೂರು ನೀಡಿದ್ದಾರೆ.