ಬೆಂಗಳೂರು : ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಮಹಿಳೆಯ ಭೀಕರ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಆರೋಪಿಯ ಗುರುತು ಪತ್ತೆಯಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಲಕ್ಷ್ಮೀ ಕೊಲೆ ಪ್ರಕರಣ ಸಂಬಂಧ ಇದೀಗ ಆರೋಪಿಯ ಗುರುತು ಪತ್ತೆಯಾಗಿದ್ದು, ಆರೋಪಿಯ ಹುಡುಕಾಟ ಮುಂದುವರೆದಿದೆ. ಆರೋಪಿ ಹೊರರಾಜ್ಯದವನಗಿದ್ದು, ಬೆಂಗಳೂರಿನಲ್ಲೇ ವಾಸವಾಗಿದ್ದ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 50ಕ್ಕೂ ಹೆಚ್ಚು ತುಂಡು ಮಾಡಿ ಪ್ರೀಜರ್ನಲ್ಲಿ ತುಂಬಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆಯ ಪತಿ ಹೇಮಂತ್ ಪತ್ನಿ ಸಾವಿಗೆ ಆಕೆ ಕೆಲಸ ಮಾಡುತ್ತಿದ್ದ ನಾಲ್ವರು ಸಹೋದ್ಯೋಗಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ಆರೋಪಿಯ ಗುರುತು ಪತ್ತೆ ಹಚ್ಚಲಾಗಿದೆ.