ನವದೆಹಲಿ : ಅಸ್ಸಾಂನ ಉತ್ತರ-ಮಧ್ಯ ಭಾಗದಲ್ಲಿ ಭಾನುವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.2 ಎಂದು ಅಳೆಯಲಾಯಿತು.
ಬ್ರಹ್ಮಪುತ್ರದ ಉತ್ತರ ದಂಡೆಯ ಉದಲಗುಡಿ ಜಿಲ್ಲೆಯಲ್ಲಿ ಬೆಳಗ್ಗೆ 7.47ಕ್ಕೆ ಭೂಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರದ ವರದಿ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಭೂಮಿಯಿಂದ 15 ಕಿಲೋಮೀಟರ್ ಆಳದಲ್ಲಿದೆ. ಭೂಕಂಪದ ಕೇಂದ್ರಬಿಂದು ಗುವಾಹಟಿಯಿಂದ ಉತ್ತರಕ್ಕೆ 105 ಕಿಮೀ ಮತ್ತು ತೇಜ್‌ಪುರದಿಂದ ಪಶ್ಚಿಮಕ್ಕೆ 48 ಕಿಮೀ ದೂರದಲ್ಲಿ ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯ ಸಮೀಪದಲ್ಲಿದೆ.
ಸಮೀಪದ ದರ್ರಾಂಗ್, ತಮುಲ್‌ಪುರ್, ಸೋನಿತ್‌ಪುರ್, ಕಾಮ್ರೂಪ್ ಮತ್ತು ಬಿಸ್ವನಾಥ್ ಜಿಲ್ಲೆಗಳ ಜನರು ಸಹ ಕಂಪನವನ್ನು ಅನುಭವಿಸಿದ್ದಾರೆ. ಬ್ರಹ್ಮಪುರದ ದಕ್ಷಿಣ ಅಂಚಿನಲ್ಲಿರುವ ಕಾಮ್ರೂಪ್ ಮಹಾನಗರ, ಮೋರಿಗಾಂವ್ ಮತ್ತು ನಾಗಾಂವ್‌ನಲ್ಲಿಯೂ ಭೂಕಂಪನದ ಅನುಭವವಾಗಿದೆ. ಪಶ್ಚಿಮ ಅರುಣಾಚಲ ಪ್ರದೇಶ ಹಾಗೂ ಪೂರ್ವ ಭೂತಾನ್‌ನ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ವರದಿ ತಿಳಿಸಿದೆ.