ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೃಷಿ ನವೋದ್ಯಮ ಹೊಸ ಯೋಜನೆ ಜಾರಿಗೊಳಿಸುತ್ತಿದ್ದು, ಇದಕ್ಕಾಗಿ ಗರಿಷ್ಠ 20 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೃಷಿ ವಲಯಲ್ಲಿನ ನೂತನ ತಾಂತ್ರಿಕತೆಗಳು, ಆವಿಷ್ಕಾರ ಹಾಗೂ ನವೀನ ಪರಿಕಲ್ಪನೆಗಳ ಸೇವೆಗಳನ್ನು ಒಳಗೊಂಡ ವಾಣಜ್ಯೀಕರಣವನ್ನು ಉತ್ತೇಜಿಸುವ ಗುರಿಯೊಂದಿಗೆ ನೂತನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿ ಪರ ರೈತರು ಹೊಸದಾಗಿ ಕೃಷಿಯಲ್ಲಿ ನವೋದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಸ್ಟಾರ್ಟಪ್ ಯೋಜನೆಯ ವರದಿಯ ಶೇ.50 ರಷ್ಟು ಅಂದರೆ 5 ರಿಂದ 20 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ.
ಅಲ್ಲದೆ ಈಗಾಗಾಲೆ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು (Scale up)ಗೂ ಶೇ.50 ರಷ್ಟು ಸಹಾಯಧನ (20 ರಿಂದ ಗರಿಷ್ಠ 50 ಲಕ್ಷ ರೂ.) ವರೆಗೆ ಬ್ಯಾಂಕ್ ದಿಂದ ಸಾಲದ ಮೂಲಕ (Backended Subsidy) ನೀಡಲಾಗುವುದು. ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ, ಅನುಷ್ಠಾನ ಸಮಿತಿ ಒಪ್ಪಿಗೆಯ ನಂತರ ರಾಜ್ಯ ಮಟ್ಟದಲ್ಲಿ ಅನುಮೋದನೆ ಪಡೆದ ನಂತರ ಈ ಸಹಾಯಧನ ನೀಡಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಹತ್ತಿರದ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಅಥವಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.