ಮಡಿಕೇರಿ: ಜಿಲ್ಲೆಯ ಕೊಡಗಿನ ಭಾಗಮಂಡಲದ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಬವವಾಗಿದೆ. ನಿಗಧಿತ ಸಮಯದಂತೆ ಇಂದು ಇಂದು ಮಧ್ಯಾಹ್ನ 1.44 ನಿಮಿಷಕ್ಕೆ ಮಕರ ಲಗ್ನದಲ್ಲಿ ಕಾವೇರಿ ಜಲಧಾರೆ ತೀರ್ಥೋದ್ಬವಗೊಂಡಿತು.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್, 17 ರ ಇಂದು ಮಧ್ಯಾಹ್ನ 1.44 ನಿಮಿಷಕ್ಕೆ ಮಕರ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಿದೆ.
ಸಾಂಪ್ರದಾಯಿಕ ಉಡುಪಿನಲ್ಲಿ ಮೂಲನಿವಾಸಿ ಮಹಿಳೆಯರು ಆಗಮಿಸಿದ್ದು, ಹಾಡು ನೃತ್ಯದ ಮೂಲಕ ಕಾವೇರಿ ಸ್ವಾಗತಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು. ಇದೀಗ ಸೂರ್ಯ ಕನ್ಯಾರಾಶಿಯಿಂದ ತುಲಾರಾಶಿಗೆ ಪಥ ಬದಲಾಯಿಸಿದ್ದು, ಈ ವೇಳೆ ಮಕರ ಲಗ್ನದಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಉದ್ಭವಿಸಿದಳು. ಮಡಿಕೇರಿ ತಾಲ್ಲೂಕಿನ ತಲಕಾವೇರಿಯಲ್ಲಿರುವ ಬ್ರಹ್ಮ ಕುಂಡಿಕೆಯಲ್ಲಿ ಭಕ್ತರಿಗೆ ದರ್ಶನ ತಾಯಿ ಕಾವೇರಿ ದರ್ಶನ ನೀಡಿದಳು. ಈ ಒಂದು ತೀರ್ಥೋತ್ಸವ ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜ ಯದುವೀರ್ ಕೃಷ್ಣರಾಜ ದತ್ತ ಒಡೆಯರ್ ಅವರು ಸಹ ಭಾಗವಹಿಸಿದ್ದರು.
ಪ್ರಧಾನ ಅರ್ಚಕ ಪ್ರಶಾಂತ್ ಅಚಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆದಿದ್ದು, ಕಾವೇರಿ ತೀರ್ಥೋದ್ಬವದ ಬೆನ್ನಲ್ಲೇ ಸಹಸ್ರಾರು ಭಕ್ತರು ಜಯಘೋಷ ಹಾಕಿದ್ದಾರೆ. ಇಂದು ನಡೆದಂತ ಕಾವೇರಿ ತೀರ್ಥೋದ್ಭವದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಿ, ಪವಿತ್ರ ತೀರ್ಥೋದ್ಭವದಲ್ಲಿ ಮಿಂದೆದ್ದರು.
ವಿಸ್ಮಯಕಾರಿ ಕುಂಡಿಕೆ ಮಾಹಿತಿ ಹೀಗಿದೆ..
ತಲಕಾವೇರಿಯಲ್ಲಿನ ಕುಂಡಿಕೆಯಲ್ಲಿ ಪ್ರತಿ ವರ್ಷ ಕಾವೇರಿ ತೀರ್ಥ ರೂಪದಲ್ಲಿದರ್ಶನ ನೀಡುತ್ತಾಳೆ ಎನ್ನುವುದು ಪುರಾತನ ಕಾಲದಿಂದಲೂ ಇರುವ ನಂಬಿಕೆ. ಈ ಸಂದರ್ಭ ಸಹಸ್ರಾರು ಭಕ್ತರು ತೀರ್ಥರೂಪಿಣಿ ಕಾವೇರಿ ತಾಯಿಯನ್ನು ಕಣ್ಣು ತುಂಬಿಕೊಳ್ಳುತ್ತಾರೆ.
ಕೇವಲ ಕೊಡಗು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಆಗಮಿಸಿ ಇಲ್ಲಿಂದ ತೀರ್ಥ ಕೊಂಡೊಯ್ಯುತ್ತಾರೆ. ಇಲ್ಲಿನ ಪುಟ್ಟ ಕುಂಡಿಕೆಯಲ್ಲಿನ ಕಾವೇರಿ ಜಲವನ್ನು ತೀರ್ಥವೆಂದು ನಂಬಿ ಪೂಜಿಸುವುದಲ್ಲದೆ ಮನೆಗೆ ಕೊಂಡೊಯ್ಯುತ್ತಾರೆ. ಈ ಕುಂಡಿಕೆಯನ್ನು ಭಕ್ತಿ ಭಾವದಿಂದ ಕಾಣುತ್ತಾರೆ. ನಿತ್ಯ ಇಲ್ಲಿ ಪೂಜೆ ನಡೆಯುತ್ತದೆ.