ಯಾದಗಿರಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಸಾಲ ತೀರಿಸಲು ಸ್ನೇಹಿತರೊಂದಿಗೆ ಸೆಕ್ಸ್ ಗೆ ಒಪ್ಪದ ಪತ್ನಿಯನ್ನು ಪಾಪಿ ಗಂಡನೊಬ್ಬ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುಣಸಗಿಯಲ್ಲಿ ಬೇರೆ ಪುರುಷರೊಂದಿಗೆ ಸೆಕ್ಸ್ ಗೆ ಒಪ್ಪದ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಹುಣಸಗಿಯ ಭೀಮಣ್ಣ ಎಂಬಾತ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದು, ಆರೋಪಿ ಭೀಮಣ್ಣ ಭಾಗಲೇರನನ್ನು ಪೊಲೀಸರು ಬಂಧಿಸಿದ್ದಾರೆ.
ಗಂಗನಾಳ ಗ್ರಾಮದ ಮಹಿಳೆ ಕಳೆದ ಜುಲೈ 25 ರಂದು ಗಂಡನ ಜೊತೆ ಮಲಗಿದ್ದ ವೇಳೆ ಮೃತಪಟ್ಟಿದ್ದರು. ಮೃತ ಮಹಿಳೆಯ ಸಹೋದರ ತಂಗಿಯ ಸಾವಿಗೆ ಅನುಮಾನ ವ್ಯಕ್ತಪಡಿಸಿ ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಂಗಿಯ ಮೊಬೈಲ್ ಗಮನಿಸಿದಾಗ ಕಾಲ್ ರೆಕಾರ್ಡಿಂಗ್ ನಲ್ಲಿ ಭೀಮಣ್ಣ ಭಾಗಲೇರ ಪತ್ನಿಗೆ ಕಿರುಕುಳ ನೀಡಿರುವುದು ಪತ್ತೆಯಾಗಿದ್ದು, ನೀನು ಬೇರೆಯವರ ಜೊತೆಗೆ ಸೆಕ್ಸ್ ಮಾಡಬೇಕು ಇದರಿಂದ ನನಗೆ ಖುಷಿಯಾಗುತ್ತದೆ, ಮಕ್ಕಳು ಆಗುತ್ತವೆ, ದುಡ್ಡು ಬರುತ್ತದೆ, ಸಾಲ ತೀರುತ್ತದೆ. ನೀನು ಇದನ್ನು ಮಾಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಜುಲೈ 25ರಂದು ಭೀಮಣ್ಣ ಬಾಗಲೇರ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಉಳಿದವರು ಕೊಲೆ ಮಾಡಲು ಸಹಕಾರ ನೀಡಿದ್ದಾರೆ ಎಂದು ಮೃತಳ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಭೀಮಣ್ಣನನ್ನು ಬಂಧಿಸಿದ್ದಾರೆ.