ಬೆಳಗಾವಿ : ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ವಿಚಾರವಾಗಿ ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆ ಸಂದರ್ಭದಲ್ಲಿ, ಸಮಯ, ಸನ್ನಿವೇಶ ನೋಡಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ಕ್ಲೇಮ್ ಮಾಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬದಲಾವಣೆಯಂಥ ವಿಚಾರಗಳೆಲ್ಲವೂ ಹೈಕಮಾಂಡ್ ಹಾಗೂ ಪಕ್ಷದ ಪ್ರಮುಖರು ತೀರ್ಮಾನ ಮಾಡುವ ವಿಷಯ. ಈ ಬಗ್ಗೆ ಯಾರೂ ಹಾದಿ ಬೀದಿಯಲ್ಲಿ ಚರ್ಚೆ ಮಾಡಲು ಆಗಲ್ಲ. ಅಷ್ಟೇ ಅಲ್ಲದೆ, ಸಭೆ ಸಮಾರಂಭಗಳಲ್ಲಿ, ವೈಯಕ್ತಿಕವಾಗಿ ಹೇಳಿದರೆ ಅದಕ್ಕೆಲ್ಲಾ ಮಹತ್ವ ಇಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರ ಮುಗಿದು ಹೋದ ಚರ್ಚೆ. ದೆಹಲಿ ಬೆಂಗಳೂರಿನಲ್ಲಿ ಸಾಕಷ್ಟು ವಿಚಾರಗಳನ್ನ ಹೇಳಿದ್ದಾರೆ. ಆ ಚರ್ಚೆಯನ್ನು ಮುಂದುವರೆಸುವ ಅವಶ್ಯಕತೆ ಇಲ್ಲ. ಯಾರು ಏನೇ ಹೇಳಿದರೂ ಅದೆಲ್ಲಾ ಮುಗಿದುಹೋದ ಅಧ್ಯಾಯ ಎಂದರು.

ಒಂದು ಕಡೆ ಸ್ವಾಮೀಜಿಗಳು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೋಡಿ ಎಂದರೆ ಇನ್ನೊಂದೆಡೆ ಎಂಬಿ ಪಾಟೀಲ್, ಈಶ್ವರ್ ಖಂಡ್ರೆ, ಶಾಮನೂರು ಶಿವಶಂಕರಪ್ಪ ಅವರಿಗು ಕೂಡ ಸಿಎಂ ಸ್ಥಾನ ಬಿಟ್ಟು ಕೊಡಬೇಕು ಎಂದು ಹೇಳುತ್ತಿದ್ದಾರೆ.ಇನ್ನೊಂದು ಕಡೆ ಇದೀಗ ಸಚಿವ ಸತೀಶ್ ಜಾರಕಿಹೊಳಿಯವರು 2028ಕ್ಕೆ ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿರುವುದು ಭಾರಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಿಎಂ ಹಾಗೂ ಡಿಸಿಎಂ ವಿಷಯದ ಕುರಿತಾಗಿ ಡಿಕೆ ಶಿವಕುಮಾರ್ ಅವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.ಯಾರು ಕೂಡ ಬಾಯಿ ಬಿಡಬಾರದು ಎಂದು ಖಡಕ್ ಸೂಚನೆ ಕೂಡ ಕೊಟ್ಟಿದ್ದರು ಕೂಡ ಆದರೂ ಕೂಡ ಸಚಿವ ಸತೀಶ್ ಜಾರಕಿಹೊಳಿ ಇದೀಗ ಸಿಎಂ ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Share.
Exit mobile version