ಬೆಂಗಳೂರು : ಕಾಂಗ್ರೆಸ್ ಹಿರಿಯ ಶಾಸಕ ಹಾಗು ಮಾಜಿ ಸಚಿವ ಎಚ್ ವೈ ಮೇಟಿ (79) ನಿಧನರಾಗಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಹೆಚ್.ವೈ. ಮೇಟಿ ಅವರ ಅಂತ್ಯಕ್ರಿಯೆ ಲಿಂಗಾಯತ ಧಾರ್ಮಿಕ ವಿಧಿ ವಿಧಾನದ ಪ್ರಕಾರ ನಡೆಯಲಿದೆ. ಹೆಚ್.ವೈ. ಮೇಟಿ ಅವರ ಸ್ವಗ್ರಾಮ ತಿಮ್ಮಾಪುರದಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಬೆಂಗಳೂರಿನಿಂದ ಬಾಗಲಕೋಟೆಗೆ ಬೆಳಗ್ಗೆ ಪಾರ್ಥಿವಶರೀರ ತಂದು ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅವರ ಸ್ವಗ್ರಾಮ ತಿಮ್ಮಾಪುರಕ್ಕೆ ಪಾರ್ಥಿವ ಶರೀರ ಕೊಂಡೊಯ್ದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ರಾಜಕೀಯದಲ್ಲಿ ನಡೆದುಬಂದ ಹಾದಿ
ಹುಲ್ಲಪ್ಪ ಯಮನಪ್ಪ ಮೇಟಿ ಒಬ್ಬ ಭಾರತೀಯ ರಾಜಕಾರಣಿ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರು , 14 ನೇ ಕರ್ನಾಟಕ ವಿಧಾನಸಭೆಯ ಸದಸ್ಯರು ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಮಾಜಿ ಸಚಿವರು . 2013 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ , ಮೇಟಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು, 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಅವರು ಬಿಜೆಪಿಯ ವೀರಭದ್ರಯ್ಯ ಚರಂತಿಮಠ ವಿರುದ್ಧ 15,934 ಮತಗಳ ಅಂತರದಿಂದ ಸೋತರು. ಅದಕ್ಕೂ ಮೊದಲು, ಅವರು 1989 ರಿಂದ 1999 ರವರೆಗೆ ಮತ್ತು 2004 ರಿಂದ 2007 ರವರೆಗೆ ಗುಳೇದಗುಡ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು.








