ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವರ್ಗಾವಣೆ/ನಿಯೋಜನೆಯನ್ನು ರದ್ದು ಪಡಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು, ಇವರು, ಉಲ್ಲೇಖ (1) ರಲ್ಲಿ ಮನವಿಯನ್ನು ಸಲ್ಲಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಸರ್ಕಾರದ ಅನುಮೋದನೆಯಿಲ್ಲದೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಹಂತದಲ್ಲೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಾಡಿರುವ ವರ್ಗಾವಣೆ/ನಿಯೋಜನೆ ಆದೇಶಗಳನ್ನು ಹಿಂಪಡೆಯುವಂತೆ ಕೋರಿರುತ್ತಾರೆ.
ಉಲ್ಲೇಖ (2) ರ ಸರ್ಕಾರದ ಸುತ್ತೋಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವರ್ಗಾವಣೆ ನಿಯೋಜನೆಯನ್ನು ಮಾಡಲು ಸರ್ಕಾರದ ಅನುಮೋದನೆ ಪಡೆಯುವುದು ಕಡ್ಡಾಯಗೊಳಿಸಲಾಗಿದ್ದು, ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಯಾವುದಾದರೂ ವರ್ಗಾವಣೆ /ನಿಯೋಜನೆ ಪ್ರಸ್ತಾವನೆ ಇದ್ದಲ್ಲಿ ಅಂತಹ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರನ್ನು ಬೇರೆ ಇಲಾಖೆಗಳಿಗೆ ಅಥವಾ ಅನ್ಯ ಕಾರ್ಯನಿಮಿತ್ತ ಯಾವುದೇ ಪ್ರಾಧಿಕಾರದಿಂದ ಬಂದಂತಹ ನಿಯೋಜನೆ ಕೋರಿಕೆಗಳನ್ನು ಕೂಡಾ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯತಕ್ಕದ್ದು ಎಂದು ತಿಳಿಸಲಾಗಿದೆ. ಸದರಿ ಸುತ್ತೋಲೆಯಂತೆ ಕ್ರಮವಹಿಸಲು ತಿಳಿಸಿದ ಹಾಗೂ ಸರ್ಕಾರದ ಅನುಮೋದನೆಯಿಲ್ಲದೆ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಹಂತದಲ್ಲಿ ಮಾಡಿರುವ ನಿಯೋಜನೆ/ವರ್ಗಾವಣೆಯನ್ನು ರದ್ದುಪಡಿಸುವಂತೆ ತಿಳಿಸಿದೆ.