ಬೆಂಗಳೂರು : ರಾಜ್ಯದಲ್ಲಿ ಟ್ಯಾಕ್ಸಿ, ಸಣ್ಣ ಗೂಡ್ಸ್ ಸೇರಿದಂತೆ 10 ಲಕ್ಷದೊಳಗಿನ ವಾಣಿಜ್ಯ ವಾಹನಗಳಿಗ ಶೇ.5 ರಷ್ಟು ಜೀವಿತಾವಧಿ ತೆರಿಗೆ ವಿಧಿಸುವ ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ.
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಅಧಿನಿಯಮ 2025ರ (2025ರ ಕರ್ನಾಟಕ ಅಧಿನಿಯಮ ಸಂಖ್ಯೆ:24) ಕಲಂ 1ರ ಉಪ ಕಲಂ (2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ ಉಪಬಂಧಗಳು ದಿನಾಂಕ:01.05.2025 ರಿಂದ ಜಾರಿಗೆ ಬರತಕ್ಕದ್ದೆಂದು ಈ ಮೂಲಕ ಗೊತ್ತುಪಡಿಸಿದೆ.
ವಾಣಿಜ್ಯ ವಾಹನಗಳ ಮೇಲಿನ ಮೋಟಾರು ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದು, ಮೇ 1ರಿಂದ 10 ಲಕ್ಷ ರೂ. ಮೌಲ್ಯದೊಳಗಿನ ವಾಣಿಜ್ಯ ವಾಹನ ಖರೀದಿ ತೆರಿಗೆ ದುಬಾರಿಯಾಗಲಿದೆ. ಇನ್ಮುಂದೆ ವಾಣಿಜ್ಯ ವಾಹನ ಖರೀದಿ ವೇಳೆ ಶೇ.5ರಷ್ಟು ಜೀವಿತಾವಧಿ ತೆರಿಗೆ ಪಾವತಿಸಬೇಕಿದೆ. ತೆರಿಗೆ ನಾಳೆಯಿಂದಲೇ ಜಾರಿಗೆ ಬರಲಿದೆ.
ಈವರೆಗೆ 10 ಲಕ್ಷ ರು.ಗಿಂತ ಕಡಿಮೆ ಮೌಲ್ಯದ ವಾಹನಕ್ಕೆ ಜೀವಿತಾವಧಿ ತೆರಿಗೆ ಇರಲಿಲ್ಲ. ಅದರ ಬದಲು ತ್ರೈಮಾಸಿಕವಾಗಿ ಪ್ರತಿ ಆಸನಕ್ಕೆ 100 ರು.ನಂತೆ 400 ರು. ನೀಡಬೇಕಿತ್ತು. ಈಗ ವಿಧಾನಮಂಡಲ ಅನುಮೋದಿಸಿದ್ದ ವಾಹನ ತೆರಿಗೆ ವಿಧೇಯಕಕ್ಕೆ ಗವರ್ನರ್ ಒಪ್ಪಿಗೆ ನೀಡಿದ್ದಾರೆ. ಇದರಿಂದ 10 ಲಕ್ಷ ರೂ. ಮೌಲ್ಯಕ್ಕಿಂತ ಕಮ್ಮಿ ಮೊತ್ತದ ವಾಹನಕ್ಕೆ ಶೇ.5 ಜೀವಿತಾವಧಿ ತೆರಿಗೆ, 25 ಲಕ್ಷಕ್ಕೂ ಹೆಚ್ಚಿನ ವಾಣಿಜ್ಯ ಬಳಕೆ ಇವಿಗೆ ಶೇ.10 ತೆರಿಗೆ ವಿಧಿಸಲಾಗುತ್ತದೆ.