ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹಲವು ಯೋಜನೆಗಳ ಜಾರಿ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯ ಸಮಸ್ಯೆ ಹೆಚ್ಚು ಇದೆ. ಆರೋಗ್ಯವಂತ ಜನರು ದೇಶದ ಸಂಪತ್ತಾಗಿರುತ್ತಾರೆ. ಆದ್ದರಿಂದ ಈ ಭಾಗದ ಜನರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ-ಆವಿಷ್ಕಾರ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ವಿವಿಧ ಹಂತದ ಆಸ್ಪತ್ರೆಗಳ ಕಾಮಗಾರಿಗಳನ್ನು ಆರೋಗ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಸಮರ್ಪಕ ಅನುಷ್ಠಾನಕ್ಕಾಗಿ ಪ್ರಸಕ್ತ ಸಾಲಿನಲ್ಲಿ 220 ಕೋಟಿ ರೂ. ಗಳ ವಿಶೇಷ ಅನುದಾನವನ್ನು ಮಂಡಳಿ ಒದಗಿಸುತ್ತಿದೆ. ಕಲ್ಯಾಣ ಕರ್ನಾಟಕದ ಆಸ್ಪತ್ರೆಗಳಿಗೆ 50 ಹೊಸ ಆಂಬ್ಯುಲೆನ್ಸ್‍ಗಳನ್ನು ಒದಗಿಸಲಾಗುತ್ತಿದೆ ಎಂದರು.
ಕೆ.ಕೆ.ಆರ್.ಡಿ.ಬಿ. ಮಂಡಳಿಯ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 262 ಕೋಟಿ ರೂ. ಪರಿಷ್ಕøತ ಅಂದಾಜಿಗೆ ಈಗಾಗಲೆ ಅನುಮೋದನೆ ನೀಡಿದ್ದು, ಅಂತಿಮ ಘಟ್ಟದ ಕೆಲಸ ಭರದಿಂದ ಸಾಗಿದೆ. ಶೀಘ್ರವೇ ಇದನ್ನು ಈ ಪ್ರದೇಶಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಕಲಬುರಗಿಯಲ್ಲಿ 221 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ 90 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು 72 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಗಳ ಸಾಮಥ್ರ್ಯದ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳ ಕಾಮಗಾರಿಗೆ ಈ ವರ್ಷ 75 ಕೋಟಿ ರೂ. ಅನುದಾನ ನೀಡಲು ಕೆ.ಕೆ.ಆರ್.ಡಿ.ಬಿ. ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ ನಗರದಲ್ಲಿ ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿಯೆ ಜಿಮ್ಸ್ ವೈದ್ಯಕೀಯ ಕಾಲೇಜು, ಜಯದೇವ ಆಸ್ಪತ್ರೆ, ಇತ್ತೀಚೆಗೆ ಟ್ರಾಮಾ ಸೆಂಟರ್‍ಗಳನ್ನು ಸ್ಥಾಪಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುತ್ತಿದೆ. ಇದಲ್ಲದೆ ಪ್ರಗತಿಯಲ್ಲಿರುವ 163 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ಶೀಘ್ರ ಸಾರ್ವಜನಿಕರ ಬಳಕೆಗೆ ಬರಲಿದೆ. 30 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆ ಸಾಮಥ್ರ್ಯದ ತೀವ್ರ ನಿಗಾ ಘಟಕ ಮತ್ತು 15.6 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆ ಸಾಮಥ್ರ್ಯದ ಸುಟ್ಟ ಗಾಯಗಳ ಘಟಕಕ್ಕೆ ಇತ್ತೀಚೆಗೆ ಅಡಿಗಲ್ಲು ಹಾಕಲಾಗಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರ ಆಶಯದಂತೆ ಕಲಬುರಗಿಯನ್ನು ರಿಜನಲ್ ಹೆಲ್ತ್ ಹಬ್ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ. ದೂರದ ಬೆಂಗಳೂರು, ಮುಂಬೈ, ಹೈದರಾಬಾದಿಗೆ ಹೋಗುವುದನ್ನು ತಪ್ಪಿಸಿ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡುವುದು ಇದರ ಮೂಲ ಉದ್ದೇಶವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಈ ಪ್ರದೇಶದ ಜನರ ಅನುಕೂಲಕ್ಕಾಗಿ ಹೊಸದಾಗಿ 222 ಬಸ್ಸುಗಳನ್ನು ಖರೀದಿಸಲು ಮಂಡಳಿಯು ಕೆ.ಕೆ.ಆರ್.ಟಿ.ಸಿ. ಸಂಸ್ಥೆಗೆ 90 ಕೋಟಿ ರೂ. ಅನುದಾನ ಒದಗಿಸಿದೆ 2023-24 ರಿಂದ ಇಲ್ಲಿಯವರೆಗೆ ಒಟ್ಟಾರೆ 964 ಬಸ್ಸುಗಳನ್ನು ಖರೀದಿಸಿ ಜನರ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಟ್ಟು 44 ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಅಂದಾಜು ಮೊತ್ತ 8,290 ಕೋಟಿ ರೂಪಾಯಿಗಳಿಗೆ 2,283 ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದೆ. 2024-25 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 400 ಸಮುದಾಯ ಶೌಚಾಲಯಗಳನ್ನು ನಿರ್ಮಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಪ್ರತಿ ಘಟಕಕ್ಕೆ 25 ಲಕ್ಷದಂತೆ ಒಟ್ಟು 100 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಒಟ್ಟು 1100 ಅರಿವು ಕೇಂದ್ರಗಳಿದ್ದು, ಇವುಗಳ ಪೈಕಿ 1021 ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯಗಳನ್ನಾಗಿ ಮೇಲ್ದೆರ್ಜೆಗೇರಿಸಲಾಗಿದೆ. ಸದರಿ ಅರಿವು ಕೇಂದ್ರಗಳಲ್ಲಿ ಒಟ್ಟು 12.33 ಲಕ್ಷ ಮಕ್ಕಳು ನೋಂದಣಿ ಆಗಿರುತ್ತಾರೆ. ಈ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಬೌದ್ಧಿಕ ಪ್ರಗತಿಗೆ ಪೂರಕವಾಗಿದೆ. ಉತ್ತಮ ಶಿಕ್ಷಣ ನೀಡುವ ಜೊತೆಗೆ ಉದ್ಯೋಗಾವಾಕಾಶಗಳನ್ನು ಸೃಜಿಸುವ ಉದ್ದೇಶದಿಂದ ಉದ್ಯೋಗ ಆವಿಷ್ಕಾರ ಯೋಜನೆಯನ್ನು ರೂಪಿಸಿದ್ದೇವೆ. ಇದರ ಅಡಿಯಲ್ಲಿ ಸುಮಾರು 10 ಕೋಟಿ ರೂ ವೆಚ್ಚದಲ್ಲಿ ಸುಮಾರು 25,000 ಮಕ್ಕಳಿಗೆ ಕಲಿಕೆ ಜೊತೆ ಕೌಶಲ್ಯ, ಸಿಡಾಕ್ ಹಾಗೂ “ಇಂಡಸ್ಟ್ರಿ ಲಿಂಕೇಜ್ ಸೆಲ್” ಮುಖಾಂತರ ತರಬೇತಿ ನೀಡಲಾಗುತ್ತಿದೆ.
ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ಆಧಾರಿತ ಕೌಶಲ್ಯ ನೀಡಲು ಕಲಬುರಗಿ ಮತ್ತು ಕೊಪ್ಪಳದ ತಳಕಲ್‍ನಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮಂಡಳಿಯಿಂದ ತಲಾ 60 ಕೋಟಿ ರೂ. ಹಣ ಮೀಸಲಿಟ್ಟಿದೆ. ಕಲಬುರಗಿಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ವತಿಯಿಂದ ಅತ್ಯಾಧುನಿಕ ಇನ್ಕ್ಯುಬೇಶನ್ ಮತ್ತು ಕೌಶಲ್ಯ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇದು ನುರಿತ ಪ್ರತಿಭಾವಂತ ಉದ್ಯೋಗಿಗಳನ್ನು ಸೃಷ್ಟಿಸಲಿದೆ. ಕೆ-ಟೆಕ್ ಮೂಲಕ ನವೋದ್ಯಮಗಳನ್ನು ಪೋಷಿಸಲು ಮತ್ತು ಕೈಗಾರಿಕೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನುರಿತ ಉದ್ಯೋಗಿಗಳನ್ನು ಸೃಷ್ಟಿಸುವ ಗುರಿಯನ್ನು ಈ ಕೇಂದ್ರ ಹೊಂದಿರಲಿದೆ. ಈ ಪರಿವರ್ತಕ ಯೋಜನೆಯು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಲಿದ್ದು ಕಲಬುರಗಿಯನ್ನು ನೈಪುಣ್ಯತೆ ಮತ್ತು ಅವಕಾಶಗಳ ಕೇಂದ್ರವಾಗಿ ಪರಿವರ್ತಿಸುತ್ತದೆ.
ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಹೊಸ ಫ್ಲಾಟ್-ಫ್ಲೋರ್ ಫ್ಯಾಕ್ಟರಿ (Flat floor factory) ರಾಜ್ಯದ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಒಂದು ಮಹತ್ತರ ಹೆಜ್ಜೆಯಾಗಿದೆ. ಇದು ಬಳಸಲು ಸಿದ್ಧವಾದ ಕಾರ್ಖಾನೆ ಸ್ಥಳಗಳನ್ನು ಸಂಪೂರ್ಣ ಸೌಲಭ್ಯಗಳೊಂದಿಗೆ ಉದ್ದಿಮೆದಾರರಿಗೆ ಒದಗಿಸುತ್ತದೆ. ಈ ಯೋಜನೆಯು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ ಕಲ್ಯಾಣ ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಮೊದಲ ಹೆಜ್ಜೆಯಾಗಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ತಾಲೂಕಿನ ನದಿಸಿನ್ನೂರ-ಹೊನ್ನಕಿರಣಗಿ ಬಳಿ 1,000 ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ್‍ನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಗೆ ಪೂರಕವಾದ ಮೂಲ ಸೌಕರ್ಯಕ್ಕಾಗಿ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುತ್ತಿದ್ದು, ಇದರಿಂದ 1 ಲಕ್ಷ ಜನರಿಗೆ ನೇರ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಹೇಳಿದರು.
20 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ಸರ್ಕಾರಿ (ಪುರುಷರ) ಐ.ಟಿ.ಐ. ತರಬೇತಿ ಸಂಸ್ಥೆಯನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದಲೆ ಸುಮಾರು 1,685 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು ಯೋಚಿಸಲಾಗುತ್ತಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವುದಲ್ಲದೆ ಇಲ್ಲಿನ ನಗರ ವಾಸಿಗಳ ಜೀವನ ಗುಣಮಟ್ಟ ಹೆಚ್ಚಿಸುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಇದು ಸಹಕಾರಿಯಾಗಲಿದೆ ಎಂದರು.
ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ ಕಲಬುರಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ತಲಾ 200 ಕೋಟಿ ರೂ. ಗಳನ್ನು ಒದಗಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಹಾಗೂ ಗುಣಾತ್ಮಕವಾಗಿ ಅಭಿವೃದ್ಧಿ ಪಡಿಸಲು ಹಾಗೂ ಸಮಗ್ರ ಗ್ರಾಮೀಣಾಭಿವೃದ್ಧಿ ಮಾಡುವ ಧ್ಯೇಯದೊಂದಿಗೆ “ಕಲ್ಯಾಣ ಪಥ” ಯೋಜನೆಯನ್ನು ರೂಪಿಸಲಾಗಿದೆ. ಈ ಭಾಗದ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ 1,000 ಕೋಟಿ ರೂ. ವೆಚ್ಚದಲ್ಲಿ 1,150 ಕಿ.ಮೀ. ರಸ್ತೆಗಳನ್ನು ನಿರ್ಮಿಸಲಿದೆ ಎಂದು ತಿಳಿಸಿದ್ದಾರೆ.