ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಮೃತಪಟ್ಟಿದ್ದ ದಿವ್ಯಾಂಶಿ ಎಂಬುವರ ಕಿವಿಯೋಲೆ ಕಳುವಾಗಿದೆ ಎಂದು ದಿವ್ಯಾಂಶಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೃತ ದಿವ್ಯಾಂಶಿ ಅವರ ತಾಯಿ ಅಶ್ವಿನಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗಳ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಆಕೆಯ ಕಿವಿಯಲ್ಲಿದ್ದ ಓಲೆ ಕಳುವಾಗಿದ್ದು, ಬೌರಿಂಗ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಮಾತನಾಡಿದ ದಿವ್ಯಾಂಶಿ ತಾಯಿ ಅಶ್ವಿನಿ, ದಿವ್ಯಾಂಶಿ ಹುಟ್ಟುಹಬ್ಬದ ವೇಳೆ ಆಕೆಯ ಮಾವ ಓಲೆಯನ್ನು ಉಡುಗೊರೆಯಾಗಿ ನಿದಿದ್ದರು. ಆ ಓಲೆ ಮೇಲೆ ಆಕೆಗೆ ತುಂಬಾ ಅಟ್ಯಾಚ್ ಮೆಂಟ್ ಇತ್ತು. ಹಾಗಾಗಿ ಆ ಓಲೆ ಬೇಕು ಎಂದು ಕೇಳಿದ್ದೇನೆ. ಮಗಳು ತುಂಬಾ ಆಸೆ ಪಟ್ಟು ಅದನ್ನು ಹಾಕಿಕೊಂಡಿದ್ದಳು. ಒಂದೂವರೆ ವರ್ಷದಿಂದ ಕಿವಿಯೋಲೆ ಬಿಚ್ಚಿರಲಿಲ್ಲ. ಮಗಳ ಮರಣೋತ್ತರ ಪರೀಕ್ಷೆ ಬಳಿಕ ಕಿವಿಯೋಲೆ ಕಾಣೆಯಾಗಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆ ವಿರುದ್ಧ ದೂರು ನೀಡಿದ್ದೇನೆ. ಆಸ್ಪತ್ರೆಗೆ ಹೋಗಿ ವಿಚಾರಿಸಿದರೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಅವರ ತಾಯಿ ತಿಳಿಸಿದ್ದಾರೆ.