ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರಿಗೆ ಜಾಮೀನು ನೀಡಲಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯವು ಆದೇಶ ನೀಡಿದೆ. ನಾಳೆ ಅವರು ಜೈಲಿನಿಂದ ಹೊರಗೆ ಬರುವ ಸಾಧ್ಯತೆ ಇದೇ ಎನ್ನಲಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ನಾಗೇಂದ್ರಗೆ ಇಂದು ರಿಲೀಫ್ ಸಿಕ್ಕಿದೆ.
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ಪ್ರಮುಖ ಆರೋಪಿ ಯಾಗಿ ಶಾಸಕ ಬಿ. ನಾಗೇಂದ್ರ ಗುರುತಿಸಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ರೂ. ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಳ್ಳಲು ರೂಪಿಸಿದ್ದ ಸಂಚಿನಲ್ಲಿ ಮಾಜಿ ಸಚಿವ ನಾಗೇಂದ್ರ ಪ್ರಧಾನ ಪಾತ್ರ ವಹಿಸಿದ್ದಾರೆ. ಅಕ್ರಮ ಬೆಳಕಿಗೆ ಬರುತ್ತಲೇ ಸಾಕ್ಷ್ಯಾಧಾರವಿದ್ದ ಮೂರು ಮೊಬೈಲ್ ನಾಶಪಡಿಸಿದ್ದಾರೆ ಎಂದು ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.