ಬೆಂಗಳೂರು: ಭಾರತೀಯ ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ (Flipkart), ದೇಶೀಯ ಷೇರು ಮಾರುಕಟ್ಟೆಯಲ್ಲಿ ತನ್ನ ಬಹುನಿರೀಕ್ಷಿತ ಐಪಿಒ (Initial Public Offering) ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ಸಂಸ್ಥೆಯ ಸಮೂಹ ಮುಖ್ಯ ಹಣಕಾಸು ಅಧಿಕಾರಿ (Group CFO) ಶ್ರೀರಾಮ್ ವೆಂಕಟರಾಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2015 ರಲ್ಲಿ ಫ್ಲಿಪ್ಕಾರ್ಟ್ ಸೇರಿದ್ದ ಶ್ರೀರಾಮ್, ಕಳೆದ 10 ವರ್ಷಗಳಿಂದ ಸಂಸ್ಥೆಯ ಹಣಕಾಸು ವಿಭಾಗದ ಬೆನ್ನೆಲುಬಾಗಿ ಕೆಲಸ ಮಾಡಿದ್ದರು. ಇವರ ನಾಯಕತ್ವದಲ್ಲಿ ಫ್ಲಿಪ್ಕಾರ್ಟ್ ಹಲವು ಮಹತ್ವದ ಹೂಡಿಕೆಗಳನ್ನು ಆಕರ್ಷಿಸಿತ್ತು.ವೈಯಕ್ತಿಕ ಕಾರಣಗಳಿಗಾಗಿ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು, ಮುಂದಿನ ಕೆಲವು ತಿಂಗಳುಗಳ ಕಾಲ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಅವರು ಸಂಸ್ಥೆಗೆ ನೆರವಾಗಲಿದ್ದಾರೆ.
ಶ್ರೀರಾಮ್ ಅವರ ನಿರ್ಗಮನದ ನಂತರ, ರವಿ ಅಯ್ಯರ್ ಅವರು ಫ್ಲಿಪ್ಕಾರ್ಟ್ನ ಆರ್ಥಿಕ ವ್ಯವಹಾರಗಳ ಉಸ್ತುವಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.ವಾಲ್ಮಾರ್ಟ್ ಒಡೆತನದ ಫ್ಲಿಪ್ಕಾರ್ಟ್ 2026-27ರ ಅವಧಿಯಲ್ಲಿ ಐಪಿಒ ಮೂಲಕ ಸಾರ್ವಜನಿಕ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಈ ನಿರ್ಣಾಯಕ ಸಮಯದಲ್ಲಿ ಸಿಎಫ್ಒ ಅವರ ರಾಜೀನಾಮೆ ಹೂಡಿಕೆದಾರರಲ್ಲಿ ಕುತೂಹಲ ಮೂಡಿಸಿದೆ.








