ನವದೆಹಲಿ : ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) 70ನೇ ಪೂರ್ವಭಾವಿ ಪರೀಕ್ಷೆ ಸಂಬಂಧ ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರಚೋದನೆ ಆರೋಪದ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ವಿರುದ್ಧ ದೂರು ದಾಖಲಾಗಿದೆ.
ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್‌ಸಿ) 70ನೇ ಪೂರ್ವಭಾವಿ ಪರೀಕ್ಷೆಯನ್ನು (ಪಿಟಿ) ರದ್ದುಗೊಳಿಸುವಂತೆ ಆಗ್ರಹಿಸಿ ಅಭ್ಯರ್ಥಿಗಳು ಇದೀಗ ಬೀದಿಗಿಳಿದಿದ್ದಾರೆ. ಭಾನುವಾರ ಗಾಂಧಿ ಮೈದಾನ ತಲುಪಿದ ಧರಣಿನಿರತ ಅಭ್ಯರ್ಥಿಗಳು ಅಲ್ಲಿಂದ ಕಾಲ್ನಡಿಗೆಯಲ್ಲಿ ಮುಖ್ಯಮಂತ್ರಿ ನಿವಾಸದತ್ತ ತೆರಳಿದರು. ಇದೇ ವೇಳೆ ಜನ್ ಸೂರಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಕೂಡ ಅಭ್ಯರ್ಥಿಗಳ ಜೊತೆ ಸೇರಿಕೊಂಡರು. ವಿದ್ಯಾರ್ಥಿಗಳನ್ನು ತೆರವುಗೊಳಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ತಡೆಯಲು ಬಿಹಾರ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ವಿದ್ಯಾರ್ಥಿಗಳು ಒಪ್ಪದಿದ್ದಾಗ ಅಭ್ಯರ್ಥಿಗಳ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ಇದೀಗ ಪ್ರಶಾಂತ್ ಕಿಶೋರ್ ಸೇರಿದಂತೆ 600-700 ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಾಟ್ನಾದ ಗಾಂಧಿ ಮೈದಾನದಲ್ಲಿ ಯಾವುದೇ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಡಳಿತ ನಿನ್ನೆಯೇ ಸ್ಪಷ್ಟಪಡಿಸಿದೆ ಎಂದು ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ತಿಳಿಸಿದರು. ಇದರ ಹೊರತಾಗಿಯೂ ಪ್ರತಿಭಟನಾಕಾರರು ಭಾನುವಾರ ಅಲ್ಲಿ ಜಮಾಯಿಸಿದರು. ಪ್ರತಿಭಟನಾನಿರತ ವಿದ್ಯಾರ್ಥಿಗಳು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಮಂಡಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾನುವಾರ ಸಿಎಂ ನಿವಾಸದತ್ತ ತೆರಳುತ್ತಿದ್ದಾರೆ. ಧರಣಿ ನಿರತ ಅಭ್ಯರ್ಥಿಗಳನ್ನು ತಡೆಯಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು.