ಬೆಂಗಳೂರು : ಚಾಮರಾಜಪೇಟೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದ ಪ್ರಕರಣ ಸಂಬಂಧ ಇದೀಗ ಪೊಲೀಸರು ಟಿಪ್ಪು ನಗರ ಮಸೀದಿ ಅಧ್ಯಕ್ಷ ಸೇರಿ 50 ಜನರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಸಂಕ್ರಾಂತಿ ಹಬ್ಬದ ದಿನ ಚಾಮರಾಜಪೇಟೆ ಠಾಣೆಗೆ ನೂರಾರು ಮಂದಿ ಮುತ್ತಿಗೆ ಹಾಕಿದ್ದರು. ಟಿಪ್ಪು ನಗರದಲ್ಲಿ ಪುಂಡರು ಲಾಂಗು, ಮಚ್ಚು ಹಿಡಿದು ಬೆದರಿಸುತ್ತಿದ್ದಾರೆ. ಹೆಣ್ಣುಮಕ್ಕಳು ಹೊರಗಡೆ ಬರರಲು ಭಯಪಡುವಂತಾಗಿದೆ. ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ 100 ಕ್ಕೂ ಹೆಚ್ಚು ಜನರು ಠಾಣೆಗೆ ಮುತ್ತಿಗೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಚಾಮರಾಜಪೇಟೆ ಠಾಣೆಯ ಪಿಎಸ್ ಐ ಕೊಟ್ಟ ದೂರಿನ ಮೇರೆಗೆ ಇದೀಗ ಟಿಪ್ಪು ನಗರ ಮಸೀದಿ ಅಧ್ಯಕ್ಷ ಮೆಹಬೂಬ್ ಖಾನ್ ಎ 1 ಆರೋಪಿಯಾಗಿದ್ದು, ಶಬ್ಬೀರ್ ಎ2, ಮಸೂದ್ ಎ3 ಸೇರಿದಂತೆ 50 ಕ್ಕೂ ಹೆಚ್ಚು ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.