ರಾಯಚೂರು : ಪಿಡಿಒ ಪ್ರಶ್ನೆ ಪತ್ರಿಕೆ ಲೀಕ್ ಆರೋಪದ ಹಿನ್ನೆಲೆಯಲ್ಲಿ ಯಾದಗಿರಿ ಮೂಲದ 12 ಮಂದಿ ಪರೀಕ್ಷಾರ್ಥಿಗಳ ವಿರುದ್ಧ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಹೌದು, ಪಿಡಿಒ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಆರೋಪದಡಿ 12 ಮಂದಿ ಪರೀಕ್ಷಾರ್ಥಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, 1 ಕೋಣೆಯಲ್ಲಿ 24 ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸಲಾಗಿದೆ. 24 ಪ್ರಶ್ನೆಪತ್ರಿಕೆ ಬದಲು 12 ಪ್ರಶ್ನೆಪತ್ರಿಕೆ ಮಾತ್ರ ಕಳುಹಿಸಲಾಗಿದೆ ಎಂದು ಅಭ್ಯರ್ಥಿಗಳು ಸಿಂಧನೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.
ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್ರಿಂದ ದೂರು ನೀಡಿದ್ದು, ಪಶುಪತಿ, ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್ ಸೇರಿ 12 ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ 12 ಜನರು ಯಾದಗಿರಿ ಮೂಲದರು ಎನ್ನಲಾಗಿದೆ. ಸುಳ್ಳು ಸುದ್ದಿ ಹಬ್ಬಿಸಿರುವುದು, ಪ್ರಚೋದನೆ, ರಸ್ತೆ ತಡೆದು ಪ್ರತಿಭಟನೆ ಆರೋಪದಡಿ ಎಫ್ ಐಆರ್ ದಾಖಲಿಸಲಾಗಿದೆ.