ಬೆಂಗಳೂರು : ನಿನ್ನೆ ಬೆಂಗಳೂರು ನಗರದಲ್ಲಿ ರೌಡಿ ಶೀಟರ್ ಶಿವಕುಮಾರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಬಿಜೆಪಿ ಶಾಸಕ ಭೈರತಿ ಬಸವರಾಜು ಸೇರಿದಂತೆ ಐವರ ವಿರುದ್ಧ ಎಫ್ ಆರ್ ದಾಖಲಾಗಿದೆ.
ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜು ಅವರು ಪ್ರತಿಕ್ರಿಯೆ ನೀಡಿದ್ದು, ನನಗೂ ಬಿಕ್ಲು ಶಿವ ಕೊಲೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ, ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ದೂರು ಕೊಟ್ಟ ತಕ್ಷಣ ಏಕಾಏಕಿ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ. ಯಾರೇ ದೂರು ಕೊಟ್ಟರೂ ಎಫ್ ಐಆರ್ ದಾಖಲಿಸಬಹುದಾ? ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದರು.
ಬೆಂಗಳೂರಿನಲ್ಲಿ ಬಿಕ್ಲು ಶಿವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಶಾಸಕ ಭೈರತಿ ಬಸವರಾಜ್, ಜಗದೀಶ್, ವಿಮಲ್, ಕಿರಣ್, ಅನಿಲ್ ವಿರುದ್ಧ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಬಿಕ್ಲು ಶಿವು ತಾಯಿ ವಿಜಯಲಕ್ಷ್ಮೀ ನೀಡಿದ ದೂರು ಆಧರಿಸಿ ಬಿಜೆಪಿ ಶಾಸಕ ಭೈರತಿ ಬಸವರಾಜ್, ಜಗದೀಶ್, ವಿಮಲ್, ಕಿರಣ್, ಅನಿಲ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಘಟನೆ ಹಿನ್ನೆಲೆ
ನಿನ್ನೆ ಬೆಂಗಳೂರು ನಗರದಲ್ಲಿ ರೌಡಿ ಶೀಟರ್ ಶಿವಕುಮಾರ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಹಲಸೂರು ಕೆರೆ ಬಳಿಯ ಮನೆಯ ಮುಂದೆ ರೌಡಿ ಶೀಟರ್ ಶಿವಕುಮಾರ್ ಆಲಿಯಾಸ್ ಬಿಕ್ಲು ಶಿವ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಗೈದಿದ್ದಾರೆ.
ಮನೆ ಮುಂದೆ ನಿಂತಿದ್ದಾಗಲೇ ನಾಲ್ಕೈದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಕೊಚ್ಚಿ ಕೊಲೆ ಗೈದಿದ್ದಾರೆ. ಬಿಕ್ಲು ಶಿವನನ್ನು ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಡಿ.ದೇವರಾಜ, ಜಂಟಿ ಪೊಲೀಸ್ ಆಯುಕ್ತ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.