ಮುಂಬೈ: ಭಾರತೀಯ ಚಿತ್ರರಂಗದ ಅದ್ಭುತ ಧ್ವನಿ, ಪದ್ಮವಿಭೂಷಣ ಪುರಸ್ಕೃತ ಹಿರಿಯ ಗಾಯಕಿ ಆಶಾ ಭೋಂಸ್ಲೆ (92) ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಎದೆ ನೋವು ಮತ್ತು ಸೋಂಕಿನಿಂದ (Chest Infection) ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಸಾವಿರಾರು ಚಲನಚಿತ್ರ ಗೀತೆಗಳಿಗೆ ಧ್ವನಿಯಾಗಿದ್ದ ಆಶಾ, ಭಾರತೀಯ ಸಂಗೀತ ಲೋಕದ ಧ್ರುವತಾರೆ ಎನಿಸಿಕೊಂಡಿದ್ದರು. ಆಶಾ ಭೋಂಸ್ಲೆ ಅವರು ತಮ್ಮ ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಹಿಂದಿ ಸೇರಿದಂತೆ ಕನ್ನಡ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಮೆಲೋಡಿ ಹಾಡುಗಳಿಂದ ಹಿಡಿದು ಕವ್ವಾಲಿ, ಗಜಲ್ ಮತ್ತು ಪಾಪ್ ಗೀತೆಗಳವರೆಗೆ ಅವರ ಧ್ವನಿಯ ವ್ಯಾಪ್ತಿ ಅಪಾರವಾಗಿತ್ತು.
Legendary singer Asha Bhosle passed away at Breach Candy Hospital in Mumbai at the age of 92, confirms her son Anand Bhosle.
She was admitted here due to extreme exhaustion and a chest infection. pic.twitter.com/UHGwMD7h9H
— ANI (@ANI) April 12, 2026
“ಸಂಗೀತ ಲೋಕದ ಒಂದು ಸುವರ್ಣ ಯುಗ ಇಂದು ಅಂತ್ಯಗೊಂಡಿದೆ. ಆಶಾ ಅವರ ಧ್ವನಿ ಎಂದೆಂದಿಗೂ ಅಮರ,” ಎಂದು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗದೊಂದಿಗೆ ನಂಟು
ಆಶಾ ಭೋಂಸ್ಲೆ ಅವರು ಕನ್ನಡದ ಹಲವು ಚಿತ್ರಗಳಲ್ಲಿ ಅಜರಾಮರ ಹಾಡುಗಳನ್ನು ಹಾಡಿದ್ದಾರೆ. ಅವರ ನಿಧನಕ್ಕೆ ಕರ್ನಾಟಕದ ರಾಜಕೀಯ ಗಣ್ಯರು ಹಾಗೂ ಸ್ಯಾಂಡಲ್ವುಡ್ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಮುಂಬೈನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆಶಾ ಬೋಸ್ಲೆ ಅವರ ಜೀವನ
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಜನಪ್ರಿಯ ಗಾಯಕಿಯರಲ್ಲಿ ಒಬ್ಬರಾದ ಆಶಾ ಭೋಸ್ಲೆ ಅವರು ತಮ್ಮ ಸುಮಾರು ಆರು ದಶಕಗಳ ವೃತ್ತಿಜೀವನದ ಮೂಲಕ ಸಂಗೀತ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. 1933 ಸೆಪ್ಟೆಂಬರ್ 8 ರಂದು ಜನಿಸಿದ ಇವರು, ವಿಶ್ವದಲ್ಲೇ ಅತಿ ಹೆಚ್ಚು ಹಾಡುಗಳನ್ನು ಧ್ವನಿಮುದ್ರಿಸಿದ ಕಲಾವಿದೆ ಎಂಬ ವಿಶ್ವ ದಾಖಲೆಗೂ ಭಾಜನರಾಗಿದ್ದಾರೆ.
ಬಾಲ್ಯ ಮತ್ತು ಆರಂಭಿಕ ಹಂತ:
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಆಶಾ, ತಮ್ಮ ತಂದೆ ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಅವರಿಂದ ಸಂಗೀತದ ಪ್ರಾಥಮಿಕ ಶಿಕ್ಷಣ ಪಡೆದರು. ಕೇವಲ ಒಂಬತ್ತು ವರ್ಷದವಿದ್ದಾಗಲೇ ತಂದೆಯನ್ನು ಕಳೆದುಕೊಂಡ ಆಶಾ, ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ತಮ್ಮ ಅಕ್ಕ ಲತಾ ಮಂಗೇಶ್ಕರ್ ಅವರೊಂದಿಗೆ ಚಿತ್ರರಂಗ ಪ್ರವೇಶಿಸಿದರು. 1943ರಲ್ಲಿ ಮರಾಠಿ ಚಿತ್ರದ ಮೂಲಕ ಗಾಯನ ಆರಂಭಿಸಿದ ಇವರು, 1948ರಲ್ಲಿ ‘ಚುನಾರಿಯಾ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಸವಾಲುಗಳು ಮತ್ತು ಯಶಸ್ಸು:
ಆರಂಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ ಆಶಾ ಭೋಸ್ಲೆ, ತಮ್ಮ ದೃಢ ಸಂಕಲ್ಪದಿಂದ ಬಾಲಿವುಡ್ನ ಪ್ರಮುಖ ಗಾಯಕಿಯಾಗಿ ಹೊರಹೊಮ್ಮಿದರು. ಓ.ಪಿ. ನಯ್ಯರ್, ಆರ್.ಡಿ. ಬರ್ಮನ್ ಮತ್ತು ಖಯ್ಯಾಮ್ ಅವರಂತಹ ದಿಗ್ಗಜ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಇವರು, ಚಿತ್ರಗೀತೆಗಳು ಮಾತ್ರವಲ್ಲದೆ ಗಜಲ್, ಭಜನೆ, ಪಾಪ್ ಮತ್ತು ಶಾಸ್ತ್ರೀಯ ಸಂಗೀತದಲ್ಲೂ ತಮ್ಮ ಪಾಂಡಿತ್ಯ ಪ್ರದರ್ಶಿಸಿದ್ದಾರೆ.
ಬಹುಭಾಷಾ ಗಾಯಕಿ:
ಆಶಾ ಭೋಸ್ಲೆ ಅವರು ಕೇವಲ ಹಿಂದಿ ಮತ್ತು ಮರಾಠಿ ಮಾತ್ರವಲ್ಲದೆ, ಕನ್ನಡ ಸೇರಿದಂತೆ ಸುಮಾರು 18ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಕನ್ನಡ ಚಿತ್ರರಂಗದೊಂದಿಗೂ ಇವರು ವಿಶೇಷ ನಂಟು ಹೊಂದಿದ್ದು, ಅನೇಕ ಮಧುರ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಗೌರವ ಮತ್ತು ಪ್ರಶಸ್ತಿಗಳು:
ಸಂಗೀತ ಕ್ಷೇತ್ರಕ್ಕೆ ಇವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರವು ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮವಿಭೂಷಣ’ ಮತ್ತು ಚಲನಚಿತ್ರ ಕ್ಷೇತ್ರದ ಅತ್ಯುನ್ನತ ಗೌರವ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ, ಫಿಲ್ಮ್ ಫೇರ್ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಇವರ ಮುಡಿಗೇರಿವೆ.







