ಮುಂಬೈ : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ದಿಗ್ಗಜರಾದ ಪ್ರಭಾ ಅತ್ರೆ ಅವರು ಶನಿವಾರ ಪುಣೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಅತ್ರೆ ಅವರು ಹಲವಾರು ಗೌರವಗಳು ಮತ್ತು ಮನ್ನಣೆಗಳ ಜೊತೆಗೆ ಎಲ್ಲಾ ಮೂರು ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕೆಲವೇ ದಿನಗಳ ಹಿಂದೆ ನಿಧನರಾದ ಶಾಸ್ತ್ರೀಯ ಸಂಗೀತಗಾರ ಉಸ್ತಾದ್ ರಶೀದ್ ಖಾನ್ ಅವರ ನಿಧನದಿಂದ ಈಗಾಗಲೇ ಶೋಕತಪ್ತರಾಗಿದ್ದ ಸಂಗೀತ ಲೋಕವನ್ನು ಅತ್ರೆ ಅವರ ನಿಧನ ದುಃಖದಲ್ಲಿ ಮುಳುಗಿಸಿದೆ.
ಪ್ರಭಾ ಅತ್ರೆ ಅವರು, 1990-ಪದ್ಮಶ್ರೀ, 2002-ಪದ್ಮಭೂಷಣ, 2022-ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದ ಕಲಾವಿದೆಯಾಗಿದ್ದಾರೆ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಅವರಿಗೆ ಸಂದಿತ್ತು. ಮಧ್ಯಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ್; ಮಹಾರಾಷ್ಟ್ರ ಸರ್ಕಾರದ ಪಂಡಿತ್ ಭೀಮಸೇನ ಜೋಷಿ ಶಾಸ್ತ್ರೀಯ ಸಂಗೀತ ಗೌರವ ಪುರಸ್ಕಾರ; ಕರ್ನಾಟಕ ಸರ್ಕಾರದ ಮಲ್ಲಿಕಾರ್ಜುನ ಮನ್ಸೂರ್ ಸಮ್ಮಾನ್ ಹಾಗೂ ಸ್ವರಸಮ್ರಾಟ್ ಪಂ. ಬಸವರಾಜ ರಾಗಜುರು ಸಮ್ಮಾನ್; ಗುಜರಾತ್ ಸರ್ಕಾರದ ತಾನಾ-ರೀರೀ ಸಂಗೀತ್ ಸಮ್ಮಾನ್ ಪ್ರಶಸ್ತಿಗಳು ಲಭಿಸಿದ್ದವು.