ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರೆದಿದ್ದು, ನಿನ್ನೆ ಮೂರು ಹೆಡೆಯ ಘಟಸರ್ಪ ಶಿಲೆ ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಹೊಸ ಅಚ್ಚರಿಗಳನ್ನು ಬಯಲು ಮಾಡುತ್ತಿದೆ.
ಗುರುವಾರ 12ನೇ ದಿನದ ಉತ್ಖನನದ ಸಂದರ್ಭ ಶಿಲಾ ಮುಕುಟಮಣಿ ಹಾಗೂ ಅಪರೂಪದ ತ್ರಿಮುಖಿ ನಾಗಶಿಲೆ ಪತ್ತೆಯಾಗಿವೆ. ಅಡಕೆ ಆಕಾರದ ಕಲ್ಲಿನ ಮುಕುಟಮಣಿ ಶಿಲೆಯ ಕೆಳಭಾಗದಲ್ಲಿ ರಂದ್ರ ಇರುವುದರಿಂದ ಇದು ದೇವಾಲಯದ ಶಿಲಾಮೂರ್ತಿ ಮೇಲ್ಬಾಗದಲ್ಲಿರಬಹುದಾದ ಕಿರೀಟ ಅಥವಾ ಅಲಂಕಾರಿಕ ವಸ್ತು ಆಗಿರಬಹುದೆಂದು ಪುರಾತತ್ವ ತಜ್ಞರು ಅಂದಾಜಿಸಿದ್ದಾರೆ.








