ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಯುದ್ಧದ ಭೀತಿಯು ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಇದರ ನೇರ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿವೆ.
ಸುರಕ್ಷಿತ ಹೂಡಿಕೆಯತ್ತ ಹೂಡಿಕೆದಾರರು ಮುಖ ಮಾಡಿರುವುದರಿಂದ, ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಬೆಲೆಗಳು ಗಗನಕ್ಕೇರಿವೆ.
ಇಂದಿನ ದರ ಏರಿಕೆ ವಿವರ:
ಸೋಮವಾರ ಬೆಳಿಗ್ಗೆ 11:45 ರ ಸುಮಾರಿಗೆ ಮಾರುಕಟ್ಟೆಯಲ್ಲಿ ಕಂಡುಬಂದ ಬದಲಾವಣೆಗಳು ಹೀಗಿವೆ:
ಚಿನ್ನ: ಪ್ರತಿ 10 ಗ್ರಾಂ ಚಿನ್ನದ ಬೆಲೆ ಸುಮಾರು 5,497 ರೂ. (3.39%) ಏರಿಕೆಯಾಗಿ, 1,67,601 ರೂ. ತಲುಪಿದೆ.
ಬೆಳ್ಳಿ: ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ ಕಂಡಿದ್ದು, ಪ್ರತಿ ಕೆಜಿಗೆ 9,806 ರೂ. (3.47%) ಹೆಚ್ಚಳದೊಂದಿಗೆ 2,92,450 ರೂ. ಗೆ ತಲುಪಿದೆ.
ಬೆಲೆ ಏರಿಕೆಗೆ ಕಾರಣಗಳೇನು?
ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಅಥವಾ ಯುದ್ಧದ ವಾತಾವರಣ ನಿರ್ಮಾಣವಾದಾಗ ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿಡಲು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಇದನ್ನು ‘ಸೇಫ್ ಹೆವನ್’ (Safe Haven) ಆಸ್ತಿ ಎಂದು ಪರಿಗಣಿಸಲಾಗುತ್ತದೆ.
ಭೌಗೋಳಿಕ ರಾಜಕೀಯ ಉದ್ವಿಗ್ನತೆ: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಸೇನಾ ಕ್ರಮಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
ಹಣದುಬ್ಬರದ ಭೀತಿ: ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಹಣದುಬ್ಬರವೂ ಲೋಹದ ಬೆಲೆ ಏರಿಕೆಗೆ ಸಾಥ್ ನೀಡಿದೆ.
ಕೇಂದ್ರ ಬ್ಯಾಂಕ್‌ಗಳ ಖರೀದಿ: ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು ನಿರಂತರವಾಗಿ ಚಿನ್ನವನ್ನು ಸಂಗ್ರಹಿಸುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಮಧ್ಯಪ್ರಾಚ್ಯದ ಸಂಘರ್ಷವು ರಾಜತಾಂತ್ರಿಕವಾಗಿ ತಕ್ಷಣಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯತ್ತ ಆಕರ್ಷಿತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಮಾರುಕಟ್ಟೆಯಲ್ಲಿ ಭಾರಿ ಏರಿಳಿತಗಳು ಮುಂದುವರಿಯುವ ಸಾಧ್ಯತೆಯಿದೆ,” ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಅಭಿಪ್ರಾಯಪಟ್ಟಿದ್ದಾರೆ.








