ಚಿಕ್ಕಬಳ್ಳಾಪುರ: ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂಸದ ಸುಧಾಕರ್ ಬೆಂಬಲಿಗರು ಹಾಗೂ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ನಡುವೆ ಪೋಸ್ಟರ್ ವಾರ್ ನಡೆಯುತ್ತಿದ್ದು, ಇಬ್ಬರು ಬೆಂಬಲಿಗರ ವಿರುದ್ಧ ದೂರು ದಾಖಲಾಗಿದೆ.
ಘಟನೆ ಸಂಬಂಧಿಸಿದಂತೆ ಸಂಸದ ಸುಧಾಕರ್ ಬೆಂಬಲಿಗ, ಮುನಿರಾಜು ಎಂಬಾತ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಾದ ವಿನಯ್ ಬಂಗಾರಿ, ಹಮೀಮ್, ಸುಧಾಕರ್, ದೀಪು, ಸಲೀಂ ವಿರುದ್ಧ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿದ ಆರೋಪದಡಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ ಆಟ್ರಾಸಿಟಿ ಕೇಸ್ ದಾಖಲಾಗಿದೆ.
ಸಂಸದ ಸುಧಾಕರ್ ಬೆಂಬಲಿಗರ ವಿರುದ್ಧವೂ ದೂರು ದಾಖಲಿಸಲಾಗಿದೆ. ಸಂಸದ ಸುಧಾಕರ್ ಬೆಂಬಲಿಗರಾದ ನಗರಸಭೆ ಅಧ್ಯಕ್ಷ ಗಜೇಂದ್ರ ಆತನ ಸಹೋದರ ರವಿ, ಅತ್ತಿಗೆ ಶೋಭಾ ಸೇರಿ ಮುನಿರಾಜು ವಿರುದ್ಧ ದೂರು ದಾಖಲು ಮಾಡಲಾಗಿದೆ.
ಏನಿದು ಘಟನೆ?
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರ ಕಾರು ಚಾಲಕನಾಗಿದ್ದ ಬಾಬು, ಇಂದು ಜಿಲ್ಲಾ ಪಂಚಾಯತಿ ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರ್ಕಾರಿ ಕಾರು ನಿಲ್ಲಿಸಿದ್ದಾನೆ. ಬಳಿಕ ಕಾರಿನ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.
ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಮೃತನ ಕಾರಿನಲ್ಲಿ 4 ಪುಟಗಳ ಡೆತ್ ನೋಟ್ ಸಿಕ್ಕಿದೆ.
ಮೃತ ಬಾಬು ಡೆತ್ ನೋಟ್ ನ ಮೊದಲ ಪುಟದಲ್ಲೇ, ಮೊದಲ ಸಾಲಿನಲ್ಲೇ ನನ್ನ ಸಾವಿಗೆ ಡಾ.ಕೆ.ಸುಧಾಕರ್ ಕಾರಣ ಹಾಗೂ ನಾಗೇಶ್ ಸೇರಿದಂತೆ ಜಿಲ್ಲಾ ಪಂಚಾಯತಿ ಲೆಕ್ಕ ಪರಿಶೋಧಕ ವಿಭಾಗದ ಎಸ್ ಡಿ ಎ ಮಂಜುನಾಥ್ ಹೆಸರನ್ನ ಉಲ್ಲೇಖಿಸಿದ್ದರು. ಹೀಗಾಗಿ ಸಂಸದ ಡಾ.ಕೆ ಸುಧಾಕರ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.