ಬೆಳಗಾವಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
“ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಮನಮೋಹನ್ ಸಿಂಗ್ ಕೇವಲ ರಾಜಕಾರಣಿ ಅಲ್ಲ. ಅವರೊಬ್ಬ ದೇಶ ಹಾಗೂ ಈ ಜಗತ್ತು ಕಂಡ ಮಹಾನ್ ಆರ್ಥಿಕ ತಜ್ಞ.
ಇಂದು ಭಾರತ ಜಾಗತಿಕ ಮಟ್ಟದಲ್ಲಿ ಆರ್ಥಿಕ ಪ್ರಗತಿ ಸಾಧಿಸಿದ್ದರೆ ಅದಕ್ಕೆ ಪ್ರಮುಖ ಕಾರಣ ಮನಮೋಹನ್ ಸಿಂಗ್ ಅವರ ಕ್ರಾಂತಿಕಾರಿ ನೀತಿಗಳು. ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಜಾಗತೀಕರಣಕ್ಕೆ ಒಡ್ಡಿಕೊಳ್ಳುವ ಮೂಲಕ ದೇಶವನ್ನು ಕಾಪಾಡಿದ ಆಪದ್ಭಾಂದವ.
ಇದೇ ಕಾರಣಕ್ಕೆ ಸೋನಿಯಾ ಗಾಂಧಿ ಅವರು ತಮ್ಮ ಪಾಲಿಗೆ ಬಂದ ಪ್ರಧಾನಿ ಹುದ್ದೆಯನ್ನು ಮನಮೋಹನ್ ಸಿಂಗ್ ಅವರಿಗೆ ಬಿಟ್ಟುಕೊಟ್ಟರು. ಯುಪಿಎ ಮೊದಲ ಹಾಗೂ ಎರಡನೇ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ನರೇಗಾ, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು, ಆಹಾರ ಭದ್ರತಾ ಕಾಯ್ದೆಯಂತಹ ಕ್ರಾಂತಿಕಾರಿ ಯೋಜನೆಗಳನ್ನು ದೇಶದ ಜನತೆಗೆ ಕೊಟ್ಟಿದ್ದಾರೆ.
ಇಂದು ಸಿಂಗ್ ಅವರು ದೈಹಿಕವಾಗಿ ನಮ್ಮಿಂದ ದೂರವಾಗಿರಬಹುದು. ಆದರೆ ಅವರು ಈ ದೇಶಕ್ಕೆ ನೀಡಿರುವ ಕೊಡುಗೆ ಮೂಲಕ ಸದಾ ಜೀವಂತವಾಗಿರುತ್ತಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಅವರ ಒಡನಾಡಿಗಳಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.