ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸೋನಿಯಾ ಗಾಂಧಿಗೆ ಮಹಿಳಾ ಸಂಘಟನೆಗಳ ಒಕ್ಕೂಟ ಪತ್ರ ಬರೆದಿದ್ದಾರೆ.
ಹೌದು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯದ 10 ಮಹಿಳಾ ಸಂಘಟನೆಗಳು, 40 ಮಹಿಳಾ ಹೋರಾಟಗಾರರು ಸೋನಿಯಾಗಾಂಧಿಗೆ ಪತ್ರ ಬರೆದಿದ್ದು, ಎಸ್ ಐಟಿ ತನಿಖೆಯ ಬಗ್ಗೆ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ಆರೋಪಿ ಚಿನ್ನಯ್ಯನ ಬಂಧನ, ಸುಜಾತ್ ಭಟ್ ಪ್ರಕರಣ ಹಾಗೂ ಮಾಧ್ಯಮಗಳ ವರದಿ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೊಂದವರು ಯಾರು ಹೆಸರಿನಲ್ಲಿ ಸೋನಿಯಾಗಾಂಧಿಗೆ ಪತ್ರ ಬರೆಯಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆಯೂ ಹೋರಾಟಗಾರರು ಪ್ರಸ್ತಾಪಿಸಿದ್ದಾರೆ. ಧರ್ಮಸ್ಥಳ ಕೇಸ್ ನಲ್ಲಿ ಷಡ್ಯಂತ್ರ ನಡೆದಿದೆ ಇದರಲ್ಲಿ ಹುರುಳಿಲ್ಲ ಎಂದು ಡಿ.ಕೆ. ಶಿವಕುಮಾರ್ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಡಿಸಿಎಂ ಡಿಕೆಶಿ ಹೇಳಿಕೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಪಕ್ಷಗಳ ಒತ್ತಡಕ್ಕೆ ಮಣಿದು ಧರ್ಮಸ್ಥಳದ ವರದಿ ಮಾಡುವ ಯೂಟ್ಯೂಬ್ ಚಾನೆಲ್ ಗಳನ್ನು ನಿಷೇಧ ಮಾಡಿದ್ದಾರೆ ಎಂದು ಹೇಳಿವೆ.
ಇನ್ನು ಸೋನಿಯಾಗಾಂಧಿಗೆ ಬರೆದ ಪತ್ರದಲ್ಲಿ ಹೋರಾಟಗಾರರು 3 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ.
2018ರಲ್ಲಿ ವಿ.ಎಸ್. ಉಗ್ರಪ್ಪ ಸಮಿತಿ ನೀಡಿದ ವರದಿ ಪರಿಗಣಿಸಬೇಕು.
ನ್ಯಾಯಸಮ್ಮತ ತನಿಖೆ ನಡೆಸಲು ಜನಪ್ರತಿನಿಧಿಗಳು ಸಹಕರಿಸಬೇಕು.
ಸೌಜನ್ಯ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಅಧಿಕಾರಿಗಳನ್ನು ನ್ಯಾಯಾಲಯದ ಆದೇಶದಂತೆ ತನಿಖೆಗೆ ಒಳಪಡಿಸಬೇಕೆಂದು ಮನವಿ ಮಾಡಲಾಗಿದೆ.