ಮುಂಬೈ : ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಹೊಸ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಏಕನಾಥ್ ಶಿಂಧೆ ಮತ್ತು ಎನ್ಸಿಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಂಜೆ 5.30ಕ್ಕೆ ಆಜಾದ್ ಮೈದಾನದಲ್ಲಿ ಮುಖ್ಯಮಂತ್ರಿ ಮತ್ತು ಅವರ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿ ಕೇಂದ್ರ ಸಚಿವರು ಮತ್ತು ಹಲವಾರು ಬಿಜೆಪಿ ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 42,000 ಜನರು ಭಾಗವಹಿಸಿದ್ದಾರೆ ಎನ್ನಲಾಗ್ತಿದೆ. ಇನ್ನು ರಾಜಕೀಯ ದಿಗ್ಗಜರಲ್ಲದೆ, ಮುಖೇಶ್ ಅಂಬಾನಿ ಸೇರಿ ಹಲವು ಉದ್ಯಮಿಗಳು, ಸಚಿನ್ ತೆಂಡೂಲ್ಕರ್ ಸೇರಿ ಹಲವು ಕ್ರೀಡಾ ವ್ಯಕ್ತಿಗಳು ಮತ್ತು ಶಾರೂಕ್ ಖಾನ್ ಸೇರಿ ಹಲವು ಬಾಲಿವುಡ್ ನಟರು ಭಾಗವಹಿಸಿದ್ದರು.
40,000 ಬಿಜೆಪಿ ಬೆಂಬಲಿಗರಿಗೆ ಸ್ಥಳಾವಕಾಶ ಕಲ್ಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಮತ್ತು ವಿವಿಧ ಧರ್ಮಗಳ ಮುಖಂಡರು ಸೇರಿದಂತೆ 2,000 ವಿವಿಐಪಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 4,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.