ನವದೆಹಲಿ: ದೆಹಲಿ ಸರ್ಕಾರದ 2026-27ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ, ದೆಹಲಿ ವಿಧಾನಸಭೆ (Vidhan Sabha) ಮತ್ತು ಸಮೀಪದ ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿರುವುದು ಭಾರಿ ಆತಂಕ ಮೂಡಿಸಿದೆ. ಮಂಗಳವಾರ ಬೆಳಗ್ಗೆ ದೆಹಲಿ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಬಂದಿರುವ ಇಮೇಲ್ನಲ್ಲಿ, ಮಧ್ಯಾಹ್ನದ ವೇಳೆಗೆ ಕಟ್ಟಡವನ್ನು ಸ್ಫೋಟಿಸುವುದಾಗಿ ಎಚ್ಚರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯ ಮುನ್ನವೇ ಇಡೀ ವಿಧಾನಸಭೆ ಆವರಣ ಮತ್ತು ಮೆಟ್ರೋ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರೂ ಆಗಿರುವ ರೇಖಾ ಗುಪ್ತಾ ಅವರು ಇಂದು ಮಧ್ಯಾಹ್ನ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದರು. ಸರಿಯಾಗಿ ಇದೇ ಸಮಯದಲ್ಲಿ ಬೆದರಿಕೆ ಬಂದಿರುವುದು ಉದ್ದೇಶಪೂರ್ವಕ ಕೃತ್ಯ ಎಂದು ಶಂಕಿಸಲಾಗಿದೆ.
ವಿಧಾನಸಭೆ ಮೆಟ್ರೋ ನಿಲ್ದಾಣಕ್ಕೂ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮೆಟ್ರೋ ಹಳಿ ಹಾಗೂ ನಿಲ್ದಾಣದ ಮೂಲೆ ಮೂಲೆಗಳನ್ನು ಜಾಲಾಡುತ್ತಿದ್ದಾರೆ.
ಈ ಇಮೇಲ್ನಲ್ಲಿ ಖಲಿಸ್ತಾನಿ ಪರ ಘೋಷಣೆಗಳು ಮತ್ತು ದೇಶದ ಪ್ರಮುಖ ಗಣ್ಯರ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಎಲ್ಜಿ ತರಂಜಿತ್ ಸಿಂಗ್ ಸಂಧು ಅವರಿಗೂ ಈ ಹಿಂದೆ ಇದೇ ರೀತಿಯ ಬೆದರಿಕೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೆದರಿಕೆಯ ಹೊರತಾಗಿಯೂ ಬಜೆಟ್ ಅಧಿವೇಶನ ಮುಂದುವರಿಯಲಿದ್ದು, ಭದ್ರತಾ ಸಂಸ್ಥೆಗಳು ಇಡೀ ಆವರಣವನ್ನು ತಮ್ಮ ಸುಪರ್ದಿಗೆ ಪಡೆದಿವೆ. “ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ, ಜನರು ಗಾಬರಿಪಡುವ ಅಗತ್ಯವಿಲ್ಲ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.








