ಬೆಂಗಳೂರು : ದೇಶಾದ್ಯಂತ ಸೈಬರ್ ವಂಚನೆ ಪ್ರಕರಣಗಳು ಹೆಚ್ಚು ನಡೆಯುತ್ತಿದ್ದು, ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಸೈಬರ್ ವಂಚಕರು ಬರೋಬ್ಬರಿ 2.80 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಹೊಸ ಸಿಮ್ ಖರೀದಿಸಿದ ಟೆಕ್ಕಿಗೆ ಗಿಫ್ಟ್ ಬಂದಿದೆ ಅಂತ ಹೊಸ ಮೊಬೈಲ್ ಕೊಟ್ಟಿದ್ದಾರೆ. ಇದನ್ನೇ ನಂಬಿದ ಟೆಕ್ಕಿ ಹೊಸ ಮೊಬೈಲ್ ಗೆ ಸಿಮ್ ಹಾಕಿದ್ದಾರೆ. ಆದರೆ ಗಿಫ್ಟ್ ಕೊಟ್ಟ ಮೊಬೈಲ್ ನಲ್ಲಿ ವಂಚಕರು ಮೊದಲೇ ಕೆಲವು ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿದ್ದಾರೆ.
ಟೆಕ್ಕಿ ಮೊಬೈಲ್ ಗೆ ಬರುವ ಎಲ್ಲಾ ಒಟಿಪಿಗಳು ವಂಚಕರಿಗೂ ಸಿಗುತ್ತಿತ್ತು. ಟೆಕ್ಕಿ ಮೊಬೈಲ್ ನಲ್ಲಿನ ಎಲ್ಲಾ ಡೇಟಾ ಪಡೆದ ವಂಚಕರು ಟೆಕ್ಕಿ ಬ್ಯಾಂಕ್ ಖಾತೆಯಲ್ಲಿದ್ದ 2.80 ಕೋಟಿ ರೂ. ವಂಚಿಸಿದ್ದಾರೆ. ಪ್ರಕರಣ ಸಂಬಂಧ ವೈಟ್ ಫೀಲ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.