ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರ ಮನವೊಲಿಕೆಗೆ ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಮಾತುಕತೆ ಫಲ ಕಾಣದೆ ಹೋದರೆ ಇವತ್ತು ಮಧ್ಯರಾತ್ರಿಯಿಂದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಸೇವೆ ನಿಲ್ಲಲಿದೆ.
ಈ ಸಭೆಯಲ್ಲಿ ನಾಳೆ ಕರೆ ನೀಡಿರುವ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ನಿರ್ಧಾರವಾಗಲಿದೆ. ವೇತನ ಹೆಚ್ಚಳ ಹಾಗೂ ವೇತನ ಹೆಚ್ಚಳ ಹಿಂಬಾಕಿ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಬೆಳಗ್ಗೆ 6 ಗಂಟೆಯಿಂದ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ನೌಕರರು ಮುಷ್ಕರ ಹೂಡುವುದಾಗಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ನಾಳೆ ನಾಲ್ಕೂ ನಿಗಮಗಳಿಂದ ಒಟ್ಟು 23000 ಬಸ್ಗಳು ರಸ್ತೆಗಿಳಿವುದು ಅನುಮಾನವಾಗಿದ್ದು, 1.2 ಲಕ್ಷ ಕಾರ್ಮಿಕರು ಹೋರಾಟ ನಡೆಸಲಿದ್ದಾರೆ.
ಸಾರಿಗೆ ನೌಕರರ ಸಂಸ್ಥೆಯ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಸಭೆ ಶುರುವಾಗಿದೆ ಮತ್ತು ಬಿಎಂಟಿಸಿ ಬಸ್ಗಳಲ್ಲಿ ಓಡಾಡುವ ಲಕ್ಷಾಂತರ ಜನರಿಗೆ ಮುಷ್ಕರದಿಂದ ತೊಂದರೆಯಾಗಲಿದ್ದು, ಪ್ರತಿಭಟನೆ ನಡೆಸುತ್ತಿರೋದು ಜನರಿಗೋಸ್ಕರ ದಯವಿಟ್ಟು ತಮ್ಮೊಂದಿಗೆ ಸಹಕರಿಸುವಂತೆ ಸಂಘದ ಪದಾಧಿಕಾರಿಗಳು ಭಿತ್ತಿಪತ್ರಗಳನ್ನು ಹಂಚಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.