ಮೈಸೂರು : ಈ ಹಿಂದೆ ಮಚ್ಚು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮೈಸೂರಿನ ಪಾರಂಪರಿಕ ಕಟ್ಟಡದ ಬಳಿ ವಿಲನ್ ಪಾತ್ರದಲ್ಲಿ ಸಿಗರೇಟ್ ಹಿಡಿದು ಫೋಟೋಶೂಟ್ ಮಾಡಿದ್ದಕ್ಕೆ ಮೈಸೂರಿನ ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೌದು ರಜತ್ ಕಿಶನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಲನ್ ಪಾತ್ರದಲ್ಲಿ ಕಾರ್ ನಲ್ಲಿ ಎಂಟ್ರಿಕೊಟ್ಟು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಮೈಸೂರಿನ ಹಳೆ ಡಿಸಿ ಕಚೇರಿಯ ಬಳಿ ಪಾರಂಪರಿಕ ಕಟ್ಟಡದ ಬಳಿ ಫೋಟೋ ಶೂಟ್ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎನ್ನುವ ಬರವಣಿಗೆ ಇಲ್ಲದೆ ಪೋಸ್ಟ್ ಮಾಡಿದ್ದರಿಂದ ಕನ್ನಡಪರ ಹೋರಾಟಗಾರರು ಇದೀಗ ಮೈಸೂರಿನ ಲಕ್ಷ್ಮಿಪುರ ಪೊಲೀಸ್ ಠಾಣೆಗೆ ರಜತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಈ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ದೂರು ದಾಖಲಾಗಿದೆ. ಪಾರಂಪರಿಕ ಸ್ಮಾರಕಗಳಿಗೆ ಅಪಮಾನ ಮಾಡಿರುವ ಮತ್ತು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ಪ್ರಚೋದಿಸುವ ರೀತಿಯಲ್ಲಿ ವರ್ತಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐ ಆರ್ ದಾಖಲಿಸಿಕೊಂಡಿದ್ದಾರೆ.








