ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Development Corporation Scam) ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ವಿರುದ್ದ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಅನ್ನು ಇಂದು ಸಲ್ಲಿಸಲಾಗಿದೆ. ಹಗರಣದಲ್ಲಿ ನಾಗೇಂದ್ರ ಪಾತ್ರ ಬಹು ಮುಖ್ಯವಾಗಿ ವಹಿಸಿದೆ ಅಂತ ಇಡಿ ತನ್ನ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದೆ ಎನ್ನಲಾಗಿದೆ.
ಏನಿದು ಹಗರಣ?
ಇದೇ ವರ್ಷ ಮೇ 26ರಂದು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಚೇರಿಯ ಅಧೀಕ್ಷರ ಚಂದ್ರಶೇಖನ್ (52) ಅವರು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಅವರು ಬರೆದ ಡೆತ್ ನೋಟ್ ನಲ್ಲಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ಬಗ್ಗೆ ಉಲ್ಲೇಖ ಮಾಡಿದ್ದರು. ಆಗ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸಚಿವರಾಗಿದ್ದ ಬಿ. ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೇರೆ ಶಾಖೆಯಲ್ಲಿದ್ದ ವಾಲ್ಮೀಕಿ ನಿಗಮದ ಖಾತೆಯನ್ನು ಎಂ.ಜಿ. ರೋಡ್ ಶಾಖೆಗೆ ವರ್ಗಾಯಿಸಲಾಗಿತ್ತು. ಆದರೆ, ಹೊಸ ಶಾಖೆಗೆ ಬಂದ ನಂತರ ತಾವು (ಚಂದ್ರಶೇಖರನ್) ಹೊಸ ಚೆಕ್ ಬುಕ್ ಹಾಗೂ ಪಾಸ್ ಬುಕ್ ತರುವುದು ತಡವಾಯಿತು. ಕೆಲಸದ ಒತ್ತಡದಿಂದ ಹೊಸ ಚೆಕ್ ಬುಕ್, ಪಾಸ್ ಬುಕ್ ತರಲು ಆಗಿರಲಿಲ್ಲ. ಆದರೆ, ಅಷ್ಟರೊಳಗೆ, ವರ್ಗಾವಣೆಗೊಂಡ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಅನಧಿಕೃತವಾಗಿ ಹಣ ವರ್ಗಾವಣೆ ಮಾಡಿಕೊಂಡು ಅಕ್ರಮ ಎಸಗಲಾಗಿದೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳು, ಸಚಿವರು ಹಾಗೂ ವಾಲ್ಮೀಕಿ ನಿಗಮದ ಹಿರಿಯ ಅಧಿಕಾರಿಗಳೂ ಷಾಮೀಲಾಗಿದ್ದಾರೆ. ಇದರಲ್ಲಿ ತಮ್ಮ ಪಾತ್ರವಿಲ್ಲದೇ ಇದ್ದರೂ ತಮ್ಮನ್ನು ಸಿಕ್ಕಿಹಾಕಿಸುವ ಪ್ರಯತ್ನ ಮಾಡುತ್ತಿದೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.