ಕಲಬರುಗಿ : ಕಲಬುರಗಿಯಲ್ಲಿ ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಇಬ್ಬರು ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಪರೀಕ್ಷಾ ಕೇಂದ್ರದ ಸಿಬ್ಬಂದಿಯಾದ ಶರಣಗೌಡ, ಗಣೇಶ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರೀಕ್ಷಾರ್ಥಿ ಶ್ರೀಪಾದ್ ಪಾಟೀಲ್ ದೂರು ಆಧರಿಸಿ ಎಫ್ ಐಆರ್ ದಾಖಲಿಸಲಾಗಿದೆ. ಬಿಎನ್ ಎಸ್ ಕಾಯ್ದೆ 298 ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ನಿನ್ನೆ ನಡೆದಂತ ನೀಟ್ ಪರೀಕ್ಷೆಯ ವೇಳೆಯಲ್ಲಿ ಕಲಬುರ್ಗಿ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬರ ಜನಿವಾರವನ್ನು ತೆಗೆಸಿದ್ದರು. ಇಂತಹ ಘಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತೀವ್ರವಾಗಿ ವಿರೋಧಿಸಿ, ಖಂಡಿಸಿದೆ. ಈ ಘಟನೆಯ ಬಗ್ಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್ ಮಾತನಾಡಿ, ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರ ಗಮನಕ್ಕೆ ಬಂದಿದೆ. ಈ ಘಟನೆ ಮತ್ತೊಮ್ಮೆ ನಡೆದಿರುವುದು ದುರದೃಷ್ಟಕರ. ಸರ್ಕಾರ ಕ್ರಮವಹಿಸಿದ್ದರೂ ಈ ರೀತಿ ಆಗಿದ್ದು ಖಂಡನೀಯ. ಈ ಬಗ್ಗೆ ನಾವು ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.