ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಲ್ಡರ್ ಒಬ್ಬರು ನಿಧಿ ಆಸೆಗಾಗಿ ತಾವು ಕಟ್ಟಿದ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್ ಅನ್ನೇ ಅಗೆದಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಎಳ್ಳುಕುಂಟೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಿಲ್ಡರ್ ಸುಧಾಕರ್ ಎಂಬುವವರು ನಿಧಿಯ ಆಸೆಗೆ ಬಿದ್ದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ತಾವು ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಹಿಂಭಾಗದಲ್ಲಿ ಹಳೆಯ ವೀರಗಲ್ಲು ಒಂದಿದ್ದು, ಅದರ ಕೆಳಗೆ ಅಪಾರ ಪ್ರಮಾಣದ ಧನ-ಕನಕ ಅಡಗಿದೆ ಎಂದು ಸುಧಾಕರ್ ಬಲವಾಗಿ ನಂಬಿದ್ದರು.
ಗುಪ್ತ ಕಾರ್ಯಾಚರಣೆ:
ಯಾರಿಗೂ ಅನುಮಾನ ಬರದಂತೆ ತಗಡಿನ ಶೀಟ್‌ಗಳನ್ನು ಬಳಸಿ ಕಾಂಪೌಂಡ್ ಸುತ್ತಲೂ ಕವರ್ ಮಾಡಿದ್ದ ಬಿಲ್ಡರ್, ರಹಸ್ಯವಾಗಿ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಮತ್ತು ಬೇಸ್‌ಮೆಂಟ್ ಪ್ರದೇಶದಲ್ಲಿ ಗುಂಡಿ ಅಗೆಯಲು ಆರಂಭಿಸಿದ್ದರು.
ಸ್ಥಳೀಯರ ಆಕ್ರೋಶ:
ಬಿಲ್ಡರ್ ಮಾಡುತ್ತಿರುವ ಕೆಲಸದ ಬಗ್ಗೆ ಸಂಶಯಗೊಂಡ ಸ್ಥಳೀಯ ನಿವಾಸಿಗಳು ಪರೀಕ್ಷಿಸಿದಾಗ ಗುಪ್ತನಿಧಿಗಾಗಿ ನಡೆಯುತ್ತಿದ್ದ ಈ ‘ಖತರ್ನಾಕ್’ ಪ್ಲಾನ್ ಬಯಲಾಗಿದೆ. ಅಪಾರ್ಟ್‌ಮೆಂಟ್‌ನ ಸುರಕ್ಷತೆಯನ್ನೂ ಲೆಕ್ಕಿಸದೆ ಅಡಿಪಾಯ ಅಗೆಯುತ್ತಿದ್ದ ಬಿಲ್ಡರ್ ನಡೆಯನ್ನು ಕಂಡು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ನಿವಾಸಿಗಳು ಸುಧಾಕರ್‌ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.








