ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದ ಕಿಚ್ಚು ತಾರಕಕ್ಕೇರಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ (PA) ಚಂದ್ರನಾಥ್ ಅವರ ಭೀಕರ ಹತ್ಯೆಯ ಬೆನ್ನಲ್ಲೇ, ಈಗ ಬಿಜೆಪಿ ಶಾಸಕಿಯೊಬ್ಬರ ನಿವಾಸದ ಮೇಲೆ ಬಾಂಬ್ ದಾಳಿ ನಡೆದಿದ್ದು, ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪಾನಿಹಾಟಿ ಕ್ಷೇತ್ರದ ನೂತನ ಬಿಜೆಪಿ ಶಾಸಕಿ ರತ್ನ ದೇಬನಾಥ್ ಅವರ ನಿವಾಸದ ಸಮೀಪವೇ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದಾರೆ. ಈ ಭೀಕರ ಸ್ಫೋಟದಲ್ಲಿ ಐವರು ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉದ್ವಿಗ್ನ ಪರಿಸ್ಥಿತಿ:
ಘಟನೆಯ ನಂತರ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಸಕಿಯ ನಿವಾಸ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.ಸುವೇಂದು ಅಧಿಕಾರಿ ಅವರ ಪಿಎ ಹತ್ಯೆಯಾದ ಬೆನ್ನಲ್ಲೇ ಈ ಬಾಂಬ್ ಸ್ಫೋಟ ಸಂಭವಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.
ಸದ್ಯ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ರಾಜ್ಯದ ಹಲವೆಡೆ ಹಿಂಸಾಚಾರ ತೀವ್ರಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.








