ಬೆಂಗಳೂರು : ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕ ಅವರ ಮೊಬೈಲ್ ನಂಬರ್ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಮೊಬೈಲ್ ಹ್ಯಾಕ್ ಮಾಡಿದ ಬಿಹಾರ ಮೂಲದ ವಿಕಾಸ್ ಕುಮಾರ್ ನನ್ನು ಬಂಧಿಸಿದ್ದಾರೆ. ಸದಾಶಿವನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಟ ಉಪೇಂದ್ರ ದಂಪತಿಯ ಫೋನ್ ನಂಬರ್ ಹ್ಯಾಕ್ ಮಾಡಲಾಗಿತ್ತು. ಈ ಬಗ್ಗೆ ನಟ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು, ನನ್ನ ಹಾಗೂ ಪ್ರಿಯಾಂಕಾ ಮೊಬೈಲ್ ನಂಬರ್ ಹ್ಯಾಕ್ ಆಗಿದೆ ಎಂದು ತಿಳಿಸಿದ್ದರು.
ನಟ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಪ್ರಕರಣ ಸಂಬಂಧ ಬಿಹಾರ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ್ ಮೂಲದ ವಿಕಾಸ್ ಕುಮಾರ್ ಎಂದು ತಿಳಿದುಬಂದಿದೆ. ಆನ್‌ಲೈನ್ ಲಿಂಕ್ ಮೂಲಕ ಪ್ರಿಯಾಂಕಾ ಅವರ ವಾಟ್ಸಾಪ್ ಹ್ಯಾಕ್ ಮಾಡಿ, ಹಣ ವರ್ಗಾಯಿಸಲು ವಂಚಕರು ಸಂದೇಶ ಕಳುಹಿಸಿದ್ದರು. ಇನ್ನು, ಪೊಲೀಸರ ತನಿಖೆ ವೇಳೆ ಬಿಹಾರದಲ್ಲಿ ಒಂದೇ ಊರಿನ 150ಕ್ಕೂ ಹೆಚ್ಚು ಯುವಕರು ಸೈಬರ್ ಅಪರಾಧದಲ್ಲಿ ತೊಡಗಿರುವ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಹೌದು ಸೆ.15ರಂದು ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಆಗಿತ್ತು. ಆನ್ಲೈನ್ನಲ್ಲಿ ಕೆಲ ವಸ್ತುಗಳನ್ನು ಪ್ರಿಯಾಂಕಾ ಉಪೇಂದ್ರ ಬುಕ್ ಮಾಡಿದ್ದರು. ಈ ವೇಳೆ ಮೊಬೈಲ್ಗೆ ಲಿಂಕ್ ಬಂದಿದ್ದು, ಆ ಲಿಂಕ್ ಅನ್ನು ಪ್ರಿಯಾಂಕ ಕ್ಲಿಕ್ ಮಾಡಿದ್ದರು. ಬಳಿಕ ನಟಿ ಪ್ರಿಯಾಂಕಾ ವಾಟ್ಸಾಪ್ ಹ್ಯಾಕ್ ಮಾಡಿದ್ದ ಖದೀಮ, ಅವರ ಸಂಪರ್ಕದಲ್ಲಿದ್ದವರಿಗೆ 55 ಸಾವಿರ ಹಣ ಕಳುಹಿಸುವಂತೆ ಮೆಸೇಜ್ ಮಾಡಿದ್ದ. ಈ ವೇಳೆ ಆರೋಪಿ ಯಾರೆಂದು ತಿಳಿಯಲು ಯತ್ನಿಸಿರುವ ಪ್ರಿಯಾಂಕಾ, ಪತಿ ಉಪೇಂದ್ರ ಹಾಗೂ ಮ್ಯಾನೇಜರ್ ನಂಬರ್ನಿಂದ ಕರೆ ಮಾಡಿದ್ದರು.
ಹಣ ಅಗತ್ಯವಿದೆ ಎಂದು ಪ್ರಿಯಾಂಕ ಅವರ ವಾಟ್ಸ್ಯಾಪ್ನಿಂದ ಆರೋಪಿ ಹಲವರಿಗೆ ಮೆಸೇಜ್ ಮಾಡಿದ್ದು, ಈ ವೇಳೆ ಪ್ರಿಯಾಂಕಾ ಅವರೇ ಸಂದೇಶ ಕಳುಹಿಸಿದ್ದು ಎಂದು ಕೆಲವರು ಹಣ ಹಾಕಿದ್ದಾರೆ. ಸ್ವತಃ ಉಪೇಂದ್ರ ಪುತ್ರ ಕೂಡ ತಾಯಿ ಅಕೌಂಟ್ಗೆ ಐವತ್ತು ಸಾವಿರ ಹಣಹಾಕಿದ್ದರು. ಇನ್ನು ಕೆಲವರು ಅನುಮಾನಗೊಂಡು ಪ್ರಿಯಾಂಕಾ ಅವರ ನಂಬರ್ಗೆ ಕರೆ ಮಾಡಿದರೆ ಕಾಲ್ ಕಟ್ ಆಗುತ್ತಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಸದಾಶಿವನಗರ ಠಾಣೆಗೆ ಈ ಬಗ್ಗೆ ಪ್ರಿಯಾಂಕಾ ದೂರು ನೀಡಿದ್ದರು.
ಆದರೆ, ಅದಾಗಲೇ ಸೈಬರ್ ವಂಚಕನ ಅಕೌಂಟ್ಗೆ ಒಂದೂವರೆ ಲಕ್ಷ ರೂಪಾಯಿ ಹಣ ವರ್ಗಾವಣೆ ಆಗಿತ್ತು. ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ತನಿಖೆ ವೇಳೆ ಆರೋಪಿ ಬಿಹಾರದ ದಶರತಪುರದ ನಿವಾಸಿ ಎನ್ನುವುದು ಗೊತ್ತಾಗಿತ್ತು.ಆರೋಪಿ ಬಂಧನಕ್ಕೆಂದು ಬಿಹಾರಕ್ಕೆ ಹೋದ ಪೊಲೀಸರೇ ಈ ಸೈಬರ್ ಖದೀಮರ ಜಾಲ ನೋಡಿ ಶಾಕ್ ಆಗಿದ್ದಾರೆ. 20ರಿಂದ 25 ವಯಸ್ಸಿನ ಯುವಕರು ಈ ದಂಧೆಯಲ್ಲಿ ನಿರತರಾಗಿದ್ದು, ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ತೊಡಗಿಗೊಂಡಿರುವ ಆಘಾತಕಾರಿ ವಿಷಯ ಈ ವೇಳೆ ಬೆಳಕಿಗೆ ಬಂದಿದೆ.








