ಹಾಸನ: ಇಂದು ರಾಜ್ಯಾದ್ಯಂತ ಪಿಡಿಒ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ಪಿಡಿಒ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಶಾಕ್ ನೀಡಿದ್ದಾರೆ.
ಹೌದು, ಪರೀಕ್ಷೆಗೆ ತುಂಬು ತೋಳಿನ ಬಟ್ಟೆ ಧರಿಸಿ ಬಂದಿದ್ದ ಅಭ್ಯರ್ಥಿಗಳ ಬಟ್ಟೆಯನ್ನು ಕತ್ತರಿಸಿದ್ದಾರೆ. ಅರ್ಧ ತೋಳಿನವರೆಗೆ ಬಟ್ಟೆ ಕತ್ತರಿಸಿ ಸಿಬ್ಬಂದಿ ಒಳಗೆ ಬಿಟ್ಟಿದ್ದಾರೆ. ಹಾಸನದ ಎವಿಕೆ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆದಿದೆ. ಈ ವೇಳೆ ಅಧಿಕಾರಿಗಳು ಮತ್ತು ಪರೀಕ್ಷಾರ್ಥಿಗಳ ನಡುವೆ ವಾಗ್ವಾದ ನಡೆದಿದೆ.
ವಸ್ತ್ರ ಸಂಹಿತೆ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಸ್ತ್ರ ಸಂಹಿತೆ ಸೇರಿ ಅಭ್ಯರ್ಥಿಗಳು ಪಾಲಿಸಬೇಕಾದ ಸೂಚನೆಗಳನ್ನು ಮೊದಲೇ ತಿಳಿಸಲಾಗಿದೆ. ನಮ್ಮ ಕರ್ತವ್ಯ ನಾವು ಮಾಡಲೇಬೇಕಿದೆ. ಪರೀಕ್ಷಾ ಸೂಚನೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಹೇಳಿದ್ದಾರೆ.
ಪರೀಕ್ಷಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಮುನ್ನ ಸ್ಮಾರ್ಟ್ವಾಚ್, ವಿದ್ಯುತ್ ಉಪಕರಣಗಳು, ಕ್ಯಾಲ್ಯೂಕಲೇಟರ್, ಮೊಬೈಲ್ ಫೋನ್ ತರುವುದನ್ನು ನಿಷೇಧಿಸಲಾಗಿದೆ.
ಪರೀಕ್ಷಾರ್ಥಿಗಳು ತಮ್ಮ ಗುರುತಿನ ಚೀಟಿ, ಕುಡಿಯುವ ನೀರಿನ ಬಾಟಲ್‌ಗಳಲ್ಲದೆ ಇತರೆ ವಸ್ತುಗಳು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಮಹಿಳೆಯರು ಮಾಂಗಲ್ಯಸರ ಮತ್ತು ಕಾಲುಂಗುರು ಹೊರತುಪಡಿಸಿ, ಇತರೆ ಆಭರಣಗಳ ಧರಿಸುವುದನ್ನು ನಿಷೇಧಿಸಿದೆ.
ಪುರುಷರು ಫುಲ್‌ಷರ್ಟ್. ಫ್ಯಾನ್ಸಿ ಪ್ಯಾಂಟ್, ಶೂ-ಸಾಕ್ಸ್ಗಳನ್ನು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ.