ಬೆಂಗಳೂರು : ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತೆ ದೆಹಲಿಯ ಶ್ರದ್ಧಾ ವಾಕರ್ ಹತ್ಯೆಯ ಮಾದರಿಯಲ್ಲಿ ಬೆಂಗಳೂರಲ್ಲಿ ಕೂಡ ಮಹಿಳೆಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ.
ಬೆಂಗಳೂರಿನ ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 50ಕ್ಕೂ ಹೆಚ್ಚು ತುಂಡು ಮಾಡಿ ಪ್ರೀಜರ್ನಲ್ಲಿ ತುಂಬಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆಯ ಪತಿ ಹೇಮಂತ್ ಪತ್ನಿ ಸಾವಿಗೆ ಆಕೆ ಕೆಲಸ ಮಾಡುತ್ತಿದ್ದ ನಾಲ್ವರು ಸಹೋದ್ಯೋಗಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮುಕ್ತ, ಶಶಿಧರ್ ಮತ್ತು ಸುನೀಲ್ ಮೃತ ಮಹಾಲಕ್ಷ್ಮಿಯ ಸಹೋದ್ಯೋಗಿಗಳು. ಉತ್ತರಾಖಂಡ್ ಮೂಲದ ಅಶ್ರಫ್ ಮಹಾಲಕ್ಷ್ಮಿ ಜೊತೆ ಸಲುಗೆಯಿಂದ ಇದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಾಲಕ್ಷ್ಮಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಜಗಳ ಮಾಡಿಕೊಂಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.
ಕುಟುಂಬಸ್ಥರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಪ್ರಿಯಕರ ಸೇರಿದಂತೆ ನಾಲ್ವರ ಮೇಲೆ ಕೊಲೆಯ ಶಂಕೆ ಇದೆ. ನಾಲ್ವರಿಂದ ಕೃತ್ಯ ನಡೆದ ಶಂಕೆ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.