ನವದೆಹಲಿ : ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭಾನುವಾರ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಯಿತು. ಚುನಾವಣಾ ಆಯೋಗದ ಪ್ರಕಾರ, ಅರುಣಾಚಲ ಪ್ರದೇಶದ 50 ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಇಪಿ) 5, ಕಾಂಗ್ರೆಸ್ 1 ಮತ್ತು ಇತರರು 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಸಿಕ್ಕಿಂನಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ) 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಅದರ ಪ್ರತಿಸ್ಪರ್ಧಿ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್ಡಿಎಫ್) ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಸಿಕ್ಕಿಂನಲ್ಲಿ 32 ವಿಧಾನಸಭಾ ಕ್ಷೇತ್ರಗಳಿವೆ.
ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಏಪ್ರಿಲ್ 19ರಂದು ಮತದಾನ ನಡೆದಿತ್ತು. ಸಿಕ್ಕಿಂನಲ್ಲಿ ಶೇ.79.88, ಅರುಣಾಚಲ ಪ್ರದೇಶದಲ್ಲಿ ಶೇ.82.95ರಷ್ಟು ಮತದಾನವಾಗಿದೆ.
ಸಿಕ್ಕಿಂನಲ್ಲಿ ಆಡಳಿತಾರೂಢ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್ಕೆಎಂ ಮತ್ತು ಪವನ್ ಕುಮಾರ್ ಚಾಮ್ಲಿಂಗ್ ಅವರ ಎಸ್ಡಿಎಫ್ ನಡುವೆ ಪ್ರಮುಖ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ. ಸಿಕ್ಕಿಂನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್, ಅವರ ಪತ್ನಿ ಕೃಷ್ಣ ಕುಮಾರಿ ರಾಯ್, ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್, ಭಾರತದ ಮಾಜಿ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಮತ್ತು ಬಿಜೆಪಿಯ ನರೇಂದ್ರ ಕುಮಾರ್ ಸುಬ್ಬಾ ಅವರು ರೇಸ್ ನಲ್ಲಿರುವ 146 ಅಭ್ಯರ್ಥಿಗಳಲ್ಲಿ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಎಸ್ಕೆಎಂ ಮತ್ತು ಎಸ್ಡಿಎಫ್ ತಲಾ 32 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಜೆಪಿ 31 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್ 12 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಸಿಟಿಜನ್ ಆಕ್ಷನ್ ಪಾರ್ಟಿ-ಸಿಕ್ಕಿಂ 30 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹೊಂದಿತ್ತು.
2019 ರಲ್ಲಿ, ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಎಸ್ಕೆಎಂ 17 ಸ್ಥಾನಗಳನ್ನು ಗೆದ್ದರೆ, ಎಸ್ಡಿಎಫ್ 15 ಸ್ಥಾನಗಳನ್ನು ಗಳಿಸಿತು.
60 ಸದಸ್ಯರ ಅರುಣಾಚಲ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಮುಖ ಸ್ಪರ್ಧೆ ಇದೆ. ಬಿಜೆಪಿ ಎಲ್ಲಾ 60 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಕೇವಲ 19 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಕೂಡ ಅರುಣಾಚಲ ಪ್ರದೇಶದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.