ಮಂಡ್ಯ : ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಗೆ ಮತ್ತೊಂದು ಬಲಿಯಾಗಿದ್ದು, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಮೈಕೋ ಫೈನಾನ್ಸ್ ಕಿರುಕುಳಕ್ಕೆ ಬಲಿಯಾದವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದಲ್ಲಿ ಯುವಕನೊಬ್ಬ 30 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದ್ದು, ಬಳಿಕ ಸಾಲಗಾರರ ಕಿರುಕುಳದಿಂದ ನೊಂದು ಇಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪ ಮಾಡಲಾಗಿದೆ. ವಳಗೆರೆ ಮೆಣಸ ಗ್ರಾಮದ ನವೀನ್ ಇಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆ ಬಂಕಾಪುರದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಾಳಲಾರದೆ ಕಿರಾಣಿ ಅಂಗಡಿ ಮಾಲಿಕ ನಾಗಪ ಪುಟ್ಟಪ ಗುಂಜಾಳ (36) ನೇಣಿಗೆ ಶರಣಾಗಿದ್ದಾರೆ. ಬೀದರ್ ಜಿಲ್ಲೆ ಹುಲಸೂರ ತಾಲೂಕಿನ ಗಡಿಗೌಡಗಾಂವ್ ಗ್ರಾಮದ ರೇಷ್ಮಾ ಸುನೀಲ ಸೂರ್ಯವಂಶಿ (26) ಎಂಬ ದಲಿತ ಮಹಿಳೆ ಕೂಡ ಫೈನಾನ್ಸ್ ಸಿಬ್ಬಂದಿಯ ಕಿರು ಕುಳದಿಂದ ನೇಣಿಗೆ ಶರಣಾಗಿದ್ದಾರೆ.