ತುಮಕೂರು : ಶ್ರಾವಣ ಶನಿವಾರ ಪ್ರಯುಕ್ತ ಮುತ್ತುರಾಯಸ್ವಾಮಿ ಜಾತ್ರೆಯಲ್ಲಿ ಮಾಡಿದ್ದ ಆಹಾರ ಸೇವಿಸಿ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬುಳ್ಳಾಸಂದ್ರ ಗ್ರಾಮದಲ್ಲಿ ನಡೆದಿದೆ.
ಜಾತ್ರೆಯಲ್ಲಿ ಮಾಡಿದ್ದ ಆಹಾರ ಸೇವಿಸಿದ ನಂತರ ವಾಂತಿ, ಭೇದಿ ಕಾಣಿಸಿಕೊಂಡು ಮೂವರು ಮಹಿಳೆಯರು ಮೃತಪಟ್ಟಿದ್ದು, 18 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇವರ ಜಾತ್ರೆಯಲ್ಲಿ ಮಾಡಿದ್ದ ಪ್ರಸಾದ ಸೇವನೆಯಿಂದ ಇವರು ಮೃತಪಟ್ಟಿರುವುದಾಗಿ ಸ್ಥಳೀಯರು ಶಂಕಿಸಿದ್ದಾರೆ.
ಬುಳ್ಳಾಸಂದ್ರ ಗ್ರಾಮದ ಮುತ್ತುರಾಯಸ್ವಾಮಿ, ಕರಿಯಮ್ಮ ದೇವಿ, ಭೂತಪ್ಪ ಸ್ವಾಮಿ ದೇವರಿಗೆ ಹರಿಸೇವೆ ಏರ್ಪಡಿಸಿದ್ದು, ಆರತಿ ಬೆಳಗಿದ ಹೆಣ್ಣು ಮಕ್ಕಳು ಪ್ರಸಾದವಾಗಿ ಹೆಸರುಬೇಳೆ ಪಾಯಸ, ಅನ್ನ ಸಾಂಬಾರ್ ಸೇವಿಸಿ ಮನೆಗೆ ಮರಳಿದ್ದಾರೆ. ನಂತರ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ತಿಮ್ಮಕ್ಕ(90), ಹಿರಿಯಮ್ಮ(80), ಕಾಟಮ್ಮ(40) ಮಧುಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ. ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಲಾಗಿದೆ.