ಯಾದಗಿರಿ: ರಾಜ್ಯದಲ್ಲಿ ರಸ್ತೆ ಅಪಘಾತಗಳ ಸರಣಿ ಮುಂದುವರಿದಿದ್ದು, ಇಂದು ಯಾದಗಿರಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಆರು ಮಂದಿ ಬಲಿಯಾಗಿದ್ದಾರೆ. ಕಾರು ಮತ್ತು ಖಾಸಗಿ ಬಸ್ ನಡುವೆ ನಡೆದ ಈ ಭೀಕರ ಮುಖಾಮುಖಿ ಡಿಕ್ಕಿಯಿಂದಾಗಿ ಸ್ಥಳದಲ್ಲೇ ಆರು ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಸುರಪುರ ತಾಲೂಕಿನ ದೇವಪುರ ಬಳಿ ನಡೆದಿದೆ.
ಘಟನೆಯ ವಿವರ:
ಯಾದಗಿರಿಯಿಂದ ರಾಯಚೂರಿನ ಕಡೆಗೆ ತೆರಳುತ್ತಿದ್ದ ಕಾರಿಗೆ, ಬೆಂಗಳೂರಿನಿಂದ ಕಲಬುರ್ಗಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಅಪಘಾತ ಸಂಭವಿಸಿದ ತಕ್ಷಣವೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಓಡಿ ಬಂದಿದ್ದಾರೆ. ಕಾರು ಬೆಂಕಿಗೆ ಆಹುತಿಯಾದ ಕಾರಣ ರಕ್ಷಣಾ ಕಾರ್ಯಕ್ಕೆ ಅಡಚಣೆಯುಂಟಾಗಿತ್ತು ಎನ್ನಲಾಗಿದೆ. ವಿಷಯ ತಿಳಿದ ಸುರಪುರ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟವರ ಗುರುತು ಇನ್ನು ಪತ್ತೆಯಾಗಬೇಕಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.








