ಬಳ್ಳಾರಿ :ಗ್ರಾಮೀಣ ಭಾಗದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಅಮೃತವಾಹಿನಿ ಸಂಚಾರಿ ಆರೋಗ್ಯ ಘಟಕಗಳು ಸಕಾಲದಲ್ಲಿ ಸೇವೆ ಒದಗಿಸಬೇಕು ಎಂದು ಸಂಡೂರು ಶಾಸಕರಾದ ಈ.ಅನ್ನಪೂರ್ಣ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನ್ಯಾಷನಲ್ ಮೈನಿಂಗ್ ಡೆವಲಪ್‌ಮೆಂಟ್ ಕಾರ್ಪೋರೇಷನ್ (ಎನ್‌ಎಮ್‌ಡಿಸಿ) ಡೋಣಿಮಲೈನ ಸಿಎಸ್‌ಆರ್ ಅನುದಾನದಡಿ ವಾರ್ಷಿಕ ರೂ. 3ಕೋಟಿ ವೆಚ್ಚದಲ್ಲಿ ತಾಲೂಕಿನ 26 ಗ್ರಾಮಪಂಚಾಯತಗಳ ವ್ಯಾಪ್ತಿಯ ಹಳ್ಳಿಗಳಿಗೆ ಜನತೆಯ ಮನೆ ಬಾಗಿಲಿಗೆ ಎಮ್‌ಬಿಬಿಎಸ್ ವೈದ್ಯರನ್ನು ಹೊಂದಿರುವ ತಂಡದ ಉಪಸ್ಥಿತಿಯಲ್ಲಿ ಉತ್ತಮ ದರ್ಜೆಯ ಆರೋಗ್ಯ ಸೇವೆ ಒದಗಿಸುವ ಅಮೃತವಾಹಿನಿ ಸಂಚಾರಿ ಆರೋಗ್ಯ ಘಟಕ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಡೂರು ತಾಲ್ಲೂಕಿನ ಜನತೆಯು ಆರೋಗ್ಯ ಸೇವೆಗಳನ್ನು ಪಡೆಯಬೇಕಾದಲ್ಲಿ ಆರೋಗ್ಯ ಕೇಂದ್ರಗಳಿಗೆ ತೆರಳಲು ಹೆಚ್ಚು ಸಮಯ ಮಿಸಲಿಡಬೇಕು. ಈ ಹಿನ್ನಲೆಯಲ್ಲಿ ತಾಲ್ಲೂಕಿನ 110 ಕ್ಕೂ ಹೆಚ್ಚು ಹಳ್ಳಿಗಳಿಗೆ ಅಮೃತವಾಹಿನಿ ಉಚಿತ ಸಂಚಾರಿ ಆರೋಗ್ಯ ಘಟಕದ ಮೂಲಕ ನೀಡುವ ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರೂ ಪಡೆಯಬೇಕು ಎಂದು ಅವರು ತಿಳಿಸಿದರು.
ಪ್ರತಿವಾರ ನಿರ್ದಿಷ್ಟ ಗ್ರಾಮಗಳಿಗೆ ಆಗಮಿಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಜನತೆಯು ಸೇವೆ ಪಡೆಯುವ ಮೂಲಕ ಸಂಡೂರು ತಾಲ್ಲೂಕನ್ನು ಆರೋಗ್ಯಯುತ ತಾಲ್ಲೂಕನ್ನಾಗಿ ಮಾಡಲು ಕೈ ಜೋಡಿಸಬೇಕು. ಸರ್ಕಾರ ಈಗಾಗಲೇ ನಿಮ್ಮ ಆರೋಗ್ಯ ನಮ್ಮ ಬದ್ದತೆ ಎಂಬ ಧ್ಯೇಯ ವಾಕ್ಯದಡಿ ಎಲ್ಲಾ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆಗಳನ್ನು ನೀಡುವ ಜೊತೆಗೆ ನುರಿತ ವೈದ್ಯರನ್ನು ಮತ್ತು ಸಿಬ್ಬಂದಿಯವರನ್ನು ಒದಗಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ಮಾತನಾಡಿ, ಪ್ರತಿ ಸಂಚಾರಿ ಆರೋಗ್ಯ ಘಟಕಕ್ಕೆ ಮಾಸಿಕವಾಗಿ 2 ಲಕ್ಷ 43 ಸಾವಿರ ವೆಚ್ಚ ತಗುಲುತ್ತಿದ್ದು, ಎನ್.ಎಮ್.ಡಿ.ಸಿ ಸಿ.ಎಸ್.ಆರ್ ಅಡಿ ಭರಿಸಲಾಗುತ್ತಿದೆ. ಪ್ರತಿ ಅಮೃತವಾಹಿನಿಯಲ್ಲಿ ವೈದ್ಯಾಧಿಕಾರಿಗಳು ಔಷಧ ವಿತರಕರು, ಶುಶ್ರೂಷಣಾಧಿಕಾರಿ, ಪ್ರಯೋಗಾಲಯ ತಂತ್ರಜ್ಞರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ವಾಹನ ಚಾಲಕ ಒಳಗೊಂಡAತೆ 6 ಜನರ ತಂಡ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಇದರಲ್ಲಿ ಆಕ್ಸಿಜನ್ ತುರ್ತು ಅಗತ್ಯ ಔಷಧಿಗಳು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಸೇರಿದಂತೆ ಇತರೆ ಸೌಲಭ್ಯಗಳು ಲಭ್ಯವಾಗಲಿದ್ದು, ಇದರ ಜೊತೆಗೆ ಹಿರಿಯ ನಾಗರಿಕರ ಆರೈಕೆಯನ್ನು ಮನೆ ಮಟ್ಟದಲ್ಲಿ ಕೈಗೊಳ್ಳಲಾಗುತ್ತದೆ. ಜೊತೆಗೆ ಗರ್ಭಿಣಿಯರ ತಪಾಸಣೆ, ಆರೈಕೆ ಕೈಗೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಡೂರು ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಉಪಾಧ್ಯಕ್ಷರಾದ ಲತಾ ಉಜ್ಜಪ್ಪ, ಸದಸ್ಯರಾದ ಹನುಮೇಶ್, ಪೊಂಪಣ್ಣ, ಎಲ್.ಹೆಚ್.ಶಿವಣ್ಣ, ಎನ್‌ಎಮ್‌ಡಿಸಿ ಯ ಚೀಪ್ ಜನರಲ್ ಮ್ಯಾನೇಜರ್ ಎಸ್.ಎಸ್.ಸಿಂಗ್, ಸಿಎಸ್‌ಆರ್ ನ ಜನರಲ್ ಮ್ಯಾನೆಜರ್ ಎಸ್.ಚಟರ್ಜಿ, ಡಿಜಿಎಮ್ ವೇಲು ವಸಂತ, ತಾಲ್ಲೂಕ ಆರೋಗ್ಯಾಧಿಕಾರಿ ಡಾ.ಭರತ್ ಕುಮಾರ್, ವೈದ್ಯಾಧಿಕಾರಿಗಳಾದ ಡಾ.ಸುನಿತ, ಡಾ.ಹರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಸೈಯದ್ ಶಾಕೀರ್ ಹುಸೇನ್ ಮತ್ತು ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.