ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಮಗು ಮಾರಾಟ ಜಾಲ ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಸುಲ್ತಾನ್ ಪುರದ ಅರ್ಚನಾ ಎಂಬುವರ ಮಗುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಮಹಾರಾಷ್ಟ್ರದ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸಂಗೀತ ಗೌಳಿ, ಸಂಗೀತ ತಾವಡೆ, ಮೋಹನ್ ತಾವಡೆ ಅವರನ್ನು ಬಂಧಿಸಲಾಗಿದ್ದು, ನಂದಿನಿ ಡೋರಲೇ, ನಂದಕುಮಾರ್ ಡೋಲರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಅರ್ಚನಾ ಹಾಗೂ ರಾಜು ಮುಗ್ಗುದುಮ ಜೊತೆಗೆ ಎರಡನೇ ಮದುವೆ ಮಾಡಿಸಿ ಮಗುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಲಾಗಿತ್ತು. ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಮಕ್ಕಳನ್ನು ಮಾರಾಟ ಮಾಡಿದ್ರೆ ಎಚ್ಚರ ; 5 ವರ್ಷ ಜೈಲು ಶಿಕ್ಷೆ ಜೊತೆ 1 ಲಕ್ಷ ರೂ. ದಂಡ ಫಿಕ್ಸ್
ಮಕ್ಕಳನ್ನು ಅನಧಿಕೃತವಾಗಿ ದತ್ತು ನೀಡುವುದು ಹಾಗೂ ಪಡೆಯುವುದು ಶಿಕ್ಷಾರ್ಹ ಅಪರಾಧ. ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 80 ಹಾಗೂ 81 ರನ್ವಯ ಯಾವುದೇ ವ್ಯಕ್ತಿಯಾಗಲಿ ಅಥವಾ ಸಂಸ್ಥೆಯಾಗಲಿ ಯಾವುದೇ ಅನಾಥ/ ಪರಿತ್ಯಜಿಸಲ್ಪಟ್ಟ ಮಗುವನ್ನು ದತ್ತು ನೀಡುವುದು ಅಥವಾ ಪಡೆಯುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿ ಅಥವಾ ಸಂಸ್ಥೆಗೆ 5 ವರ್ಷಗಳವರೆಗೆ ಕಾರಗೃಹ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಬಹುದು. ಈ ಅಪರಾಧದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಶಾಮೀಲಾದರೆ ಶಿಕ್ಷೆಯ ಅವಧಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.