ಬೆಂಗಳೂರು : ಬಳ್ಳಾರಿ, ಬೆಳಗಾವಿ ಬಳಿಕ ಇದೀಗ ಬೆಂಗಳೂರಿನಲ್ಲಿ ಮತ್ತೊಬ್ಬ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಅನುಷಾ ಎಂಬುವರು ಮೃತಪಟ್ಟಿದ್ದಾರೆ. ಒಂದು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ, ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಅನುಷಾ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗರ್ಜೆ ಗ್ರಾಮದ ನಿವಾಸಿ ಅನುಷಾಗೆ ತರೀಕೆರೆಯ ರಾಜ್ ನರ್ಸಿಂಗ್ ಹೋಂನಲ್ಲಿ ಸಹಜ ಹೆರಿಗೆ ಆಗಿತ್ತು. ಡೆಲಿವರಿಗೂ ಮುನ್ನ ಸ್ಕ್ಯಾನಿಂಗ್ ಮಾಡಿದಾಗ ಸ್ಟೋನ್ ಇದೆ ಎಂದು ಸ್ಕ್ಯಾನಿಂಗ್ ವರದಿ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಡೆಲಿವರಿಯಾದ ಒಂದೇ ತಿಂಗಳಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಅನುಷಾಗೆ ಆಪರೇಷನ್ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ವೇಳೆ ಕರುಳಿಗೆ ಹಾನಿಯಾಗಿತ್ತು, ಆದರೆ, ಆ ವಿಚಾರವನ್ನು ವೈದ್ಯರು ಮುಚ್ಚಿಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳೀಯ ಆಸ್ಪತ್ರೆ ವೈದ್ಯರ ಸಲಹೆಯಂತೆ ಅನುಷಾರನ್ನು ಕುಟುಂಬಸ್ಥರು ಬೆಂಗಳೂರಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.