ದಕ್ಷಿಣ ಕನ್ನಡ : ಧರ್ಮಸ್ಥಳದ ಕುರಿತು ಅಪಪ್ರಚಾರ ಆರೋಪದ ಹಿನ್ನೆಲೆಯಲ್ಲಿ ಇಂದು ಧರ್ಮಸ್ಥಳಕ್ಕೆ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ ಬ್ರಿಜೇಶ್ ಚೌಟ, ಶಾಸಕ ಎಸ್.ಆರ್. ವಿಶ್ವನಾಥ್, ಎಂಎಲ್ ಸಿ ಸಿ.ಟಿ.ರವಿ ಸೇರಿ ಹಲವರು ಭೇಟಿ ನೀಡಿದ್ದಾರೆ. ಈ ವೇಳೆ ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದಿದ್ದಾರೆ.
ಶ್ರೀಮಂಜುನಾಥನ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶ ಮಾಡಿದಾಗ ಬಿಜೆಪಿ ಸ್ವಾಗತಿಸಿದೆ. ತನಿಖೆ ನಡೆಯುವ ಸಂದರ್ಭದಲ್ಲಿ ಅನೇಕ ಗೊಂದಲ, ಅಪಪ್ರಚಾರ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಬಗ್ಗೆ ಅಪಪ್ರಚಾರ ನಡೆಸಲಾಗಿದೆ ಎಂದು ದೂರಿದ್ದಾರೆ.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಒತ್ತಡಕ್ಕೆ ಮಣಿದು ತನಿಖೆಗೆ ಆದೇಶ ಮಾಡಿದ್ದೇವೆ ಎಂದು ಹೇಳುತ್ತಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇದರ ಹಿಂದೆ ಒಂದು ಷಡ್ಯಂತ್ರವಿದೆ ಎಂದು ಉಲ್ಲೇಖಿಸಿದ್ದಾರೆ. ಇದನ್ನು ಬಹಿರಂಗಪಡಿಸಬೇಕು. ಎಸ್ಐಟಿ ತನಿಖೆ ನಡೆಯುವಾಗ ಅಪಪ್ರಚಾರ ನಡೆಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಗಳು ಕ್ರಮ ವಹಿಸಬೇಕು. ನಾಡಿನ ಜನತೆಗೆ ಕ್ಷಮೆ ಕೋರಬೇಕು ಎಂದರು.
ಬಿಜೆಪಿ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಬಗ್ಗೆ ಅಪಪ್ರಚಾರ ನಡೆಸಬಾರದು. ಭಕ್ತರಲ್ಲಿ ಗೊಂದಲ ಮೂಡಿಸಬಾರದು. ಇತರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎನ್ನಲಾಗಿದ್ದು, ಅದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.