ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವಾಗ ಅವಘಡ ಸಂಭವಿಸಿದ್ದು, ಐವರು ಮಕ್ಕಳು ಸೇರಿದಂತೆ 9 ಜನರ ಕಣ್ಣಿಗೆ ಗಾಯಗಳಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿದು 9 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಟಾಕಿ ಸಿಡಿಸುವಾಗ ಹಾಗೂ ಬೇರೆಯವರು ಪಟಾಕಿ ಸಿಡಿಸುವುದನ್ನು ಸಮೀಪದಲ್ಲಿ ನಿಂತು ಹಲವರ ಕಣ್ಣಿಗೆ ಗಾಯಗಳಾಗಿವೆ. ಗಾಯಗೊಂಡ ಮೂವರು ಮಕ್ಕಳ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಿಂಟೋ ಆಸ್ಪತ್ರೆಯಲ್ಲಿ 5 ವರ್ಷದ ಬಾಲಕ ಮತ್ತು 18 ವರ್ಷದ ಯುವಕ ಸೇರಿ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ 3 ವರ್ಷದ ಹೆಣ್ಣು ಮಗುವಿನ ಕಣ್ಣಿಗೆ ತಾಗಿ ಕಾರ್ನಿಯಾಗೆ ಹಾನಿಯಾಗಿದೆ ಎನ್ನಲಾಗಿದೆ.
ಪಟಾಕಿ ಸಿಡಿಸುವಾಗ ಈ ಸಲಹೆಗಳನ್ನು ಪಾಲಿಸಿ
ಪಟಾಕಿ ಸಿಡಿಸುವ ಮುನ್ನ ಯಾವುದೇ ಅನಾಹುತ ಆಗದಂತೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳೋದು ಒಳ್ಳೆಯದು. ಇದಕ್ಕೆ ಬೆಳಕಿನ ಹಬ್ಬ ದೀಪಾವಳಿ ಭವಿಷ್ಯ ಬೆಳಗುವ ಹಬ್ಬವಾಗಲಿ. ರಾಸಾಯನಿಕ ಪಟಾಕಿಗಳನ್ನು ತ್ಯಜಿಸಿ, ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಿ. ಪಟಾಕಿ ಸಿಡಿಸುವಾಗ ಜಾಗರೂಕರಾಗಿರಿ. ಪರಿಸರ ಸ್ನೇಹಿ ಹಬ್ಬ ನಮ್ಮ ಆದ್ಯತೆಯಾಗಲಿ ಎಂದು ವೈದ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ.
ಹೀಗಿವೆ ವೈದ್ಯರ ಸಲಹೆಗಳು
* ಪಟಾಕಿ ಖರೀದಿಸುವಾಗ ಐಎಸ್‌ಐ ಪ್ರಮಾಣೀಕರಣದ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ.
* ಪಟಾಕಿ ಬಾಕ್ಸ್ ಮೇಲಿರುವ ಎಚ್ಚರಿಕೆ, ಸೂಚನೆಗಳನ್ನು ಅನುಸರಿಸಿ.
* ಕನಿಷ್ಠ 2-3 ಅಡಿ ದೂರ ನಿ೦ತು ಪಟಾಕಿ ಹಚ್ಚಿ.
* ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ.
ಮೈದಾನ, ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿ.
* ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ.
* ಪಟಾಕಿ ಸುಡುವುದಕ್ಕೆ ಗಾಜಿನ ಬಾಟಲಿಗಳನ್ನು ಬಳಸಬೇಡಿ. ಇದರಿ೦ದ ಸಿಡಿಯುವ ಗಾಜಿನ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು.
* ಮಕ್ಕಳು ಒ೦ಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜೊತೆಗೆ ಪೋಷಕರು ಇರಲಿ.
ಪಟಾಕಿ ಸಿಡಿದಾಗ ಕಿಡಿ ಬಿದ್ದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ.
* ಅರೆಬರೆ ಸುಟ್ಟಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ.
* ಕೈಯಲ್ಲೇ ಪಟಾಕಿ ಸಿಡಿಸುವ ಸಾಹಸ ಬೇಡ.
* ಅರೆಬರೆ ಸುಟ್ಟಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ.