ನಾಸಿಕ್ : ಮಹಾರಾಷ್ಟ್ರದ ನಾಸಿಕ್‌ನಲ್ಲಿ ತಡರಾತ್ರಿ ಟೆಂಪೋ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 6 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ 7:30 ರ ಸುಮಾರಿಗೆ ಅಯ್ಯಪ್ಪ ದೇವಸ್ಥಾನದ ಬಳಿಯ ದ್ವಾರಕಾ ವೃತ್ತದಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ. ಸಿಡ್ಕೊ ಪ್ರದೇಶಕ್ಕೆ ಹೋಗುತ್ತಿದ್ದ ಟೆಂಪೋದಲ್ಲಿ 16 ಪ್ರಯಾಣಿಕರಿದ್ದರು. ಅವರು ನಿಫಡ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದರು. ಟೆಂಪೋ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಕಬ್ಬಿಣದ ರಾಡ್‌ಗಳನ್ನು ಹೊತ್ತ ಟ್ರಕ್ ಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತಕ್ಷಣದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಕೆಲವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಇತರರನ್ನು ಚಿಕಿತ್ಸೆಗಾಗಿ ಖಾಸಗಿ ವೈದ್ಯಕೀಯ ಸೌಲಭ್ಯಗಳಿಗೆ ದಾಖಲಿಸಲಾಯಿತು ಎಂದು ಅಧಿಕಾರಿ ಹೇಳಿದರು.