ಕಾಬೂಲ್:ಅಫ್ಘಾನಿಸ್ತಾನದಲ್ಲಿ ಶುಕ್ರವಾರ ತಡರಾತ್ರಿ (ಏಪ್ರಿಲ್ 3, 2026) ಸಂಭವಿಸಿದ ಭೀಕರ ಭೂಕಂಪವು ಭಾರಿ ಸಾವು-ನೋವುಗಳಿಗೆ ಕಾರಣವಾಗಿದೆ. ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲಾಗಿರುವ ಈ ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತ ಶ್ರೇಣಿಯಾಗಿದ್ದು, ಇದರ ಕಂಪನವು ಭಾರತದ ರಾಜಧಾನಿ ದೆಹಲಿ ಮತ್ತು ಜಮ್ಮು-ಕಾಶ್ಮೀರದಲ್ಲೂ ಅರಿವಾಗಿದೆ.
ಕಾಬೂಲ್‌ನ ಹೊರವಲಯದಲ್ಲಿ ಭೂಕಂಪದ ತೀವ್ರತೆಗೆ ಮನೆಯೊಂದು ಕುಸಿದು ಬಿದ್ದ ಪರಿಣಾಮ ಒಂದೇ ಕುಟುಂಬದ ಎಂಟು ಸದಸ್ಯರು ಸಾವನ್ನಪ್ಪಿದ್ದಾರೆ ಮತ್ತು ಒಂದು ಮಗು ಗಾಯಗೊಂಡಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.ದೆಹಲಿ, ಪಂಜಾಬ್, ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜನರು ಭೂಕಂಪದ ಅನುಭವ ಪಡೆದಿದ್ದಾರೆ. ಲೈಟ್‌ಗಳು ಮತ್ತು ಫ್ಯಾನ್‌ಗಳು ಅಲುಗಾಡುತ್ತಿರುವುದನ್ನು ಕಂಡು ಜನರು ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ.
ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 150 ಕಿ.ಮೀ ಆಳದಲ್ಲಿ ಸಂಭವಿಸಿದೆ. ಈ ಕಾರಣದಿಂದಾಗಿ ಕಂಪನದ ತೀವ್ರತೆ ವಿಶಾಲ ವ್ಯಾಪ್ತಿಯಲ್ಲಿ ಅರಿವಿಗೆ ಬಂದಿದ್ದರೂ, ಸಾವು-ನೋವುಗಳ ಪ್ರಮಾಣ ದೊಡ್ಡ ಮಟ್ಟದಲ್ಲಿ ಸಂಭವಿಸಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.








