ಬಲೂಚಿಸ್ತಾನ್ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ. ಬಲೂಚಿಸ್ತಾನದ ಮುಸಾಖೇಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಬಲೂಚಿಸ್ತಾನದ ಮುಸಾಖೇಲ್ ಜಿಲ್ಲೆಯಲ್ಲಿ ಬಂದೂಕುಧಾರಿಗಳು ಬಸ್ಸಿನಿಂದ ಕೆಳಗಿಳಿಯುವಂತೆ ಬಲವಂತಪಡಿಸಿ ಅವರ ಗುರುತುಗಳನ್ನು ಪರಿಶೀಲಿಸಿದ ನಂತರ ಗುಂಡು ಹಾರಿಸಿ ಕನಿಷ್ಠ 33 ಮಂದಿಯನ್ನು ಹತ್ಯೆ ಮಾಡಿದ್ದಾರೆ ಎಂದು ಎಂದು ಪಾಕಿಸ್ತಾನದ ಡಾನ್ ವರದಿ ಮಾಡಿದೆ.
ಮುಸಾಖೇಲ್ನ ರಾರಾಶಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಅಂತರ-ಪ್ರಾಂತೀಯ ಹೆದ್ದಾರಿಯನ್ನು ತಡೆದು ಪ್ರಯಾಣಿಕರನ್ನು ಬಸ್ಗಳಿಂದ ಇಳಿಸಿದ್ದಾರೆ ಎಂದು ಸಹಾಯಕ ಆಯುಕ್ತ ಮುಸಖೈಲ್ ನಜೀಬ್ ಕಾಕರ್ ಅವರನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ.
ಜಿಲ್ಲಾಧಿಕಾರಿ ಹಮೀದ್ ಜಹೀರ್ ಅವರ ಪ್ರಕಾರ, ಕನಿಷ್ಠ 10 ಟ್ರಕ್ಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಅವುಗಳ ಚಾಲಕರು ಸಾವನ್ನಪ್ಪಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ತಲುಪಿ ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
“ಮೃತರು ಪಂಜಾಬ್ ಮೂಲದವರು ಎಂದು ಹೇಳಲಾಗಿದೆ” ಎಂದು ಅವರು ಡಾನ್ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಈ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಪಾಕಿಸ್ತಾನ ಮತ್ತು ಇರಾನ್ ನಡುವಿನ ರೈಲು ಮಾರ್ಗ ಮತ್ತು ಪ್ರಾಂತೀಯ ರಾಜಧಾನಿ ಕ್ವೆಟ್ಟಾವನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ರೈಲ್ವೆ ಸೇತುವೆಯನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿಗಳು ನಡೆದಿವೆ ಎಂದು ರೈಲ್ವೆ ಅಧಿಕಾರಿ ಮುಹಮ್ಮದ್ ಕಾಶಿಫ್ ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.